ಬಿಎಸ್ ವೈಗೆ ಮಸಿ ಬಳಿಯಲು ಬಿಜೆಪಿಯೇ ಯತ್ನಾಳರನ್ನು ಮುಂದೆ ಬಿಟ್ಟಿದೆಯೇ?: ಕಾಂಗ್ರೆಸ್

ಬೆಂಗಳೂರು :“ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ” ಎಂದಿದ್ದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಯತ್ನಾಳ್‌ರ ಜತೆ ರಹಸ್ಯ ಮಾತುಕತೆ ಮಾಡಿದ್ದಾರೆ.ಇಂತಹ ಸದಾರಮೆ ನಾಟಕ ಬಿಜೆಪಿಗೆ ಮಾತ್ರ ಸಾಧ್ಯವೇನೋ! ಎಂದು ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಗಳನ್ನು ಮಾಡಿದೆ.
ಬಿ.ಯಸ್. ಯಡಿಯೂರಪ್ಪ ಅವರಿಗೆ ಮಸಿ ಬಳಿಯಲು ಬಿಜೆಪಿಯೇ ಯತ್ನಾಳರನ್ನು ಮುಂದೆ ಬಿಟ್ಟಿದೆಯೇ? ಇದು ತೊಟ್ಟಿಲನ್ನೂ ತೂಗುತ್ತಾ, ಮಗುವನ್ನೂ ಚಿವುಟುವ ಆಟವೇ? ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.
ಯತ್ನಾಳರನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ, ಅವರು ನಮ್ಮ ಪಕ್ಷದ ನಾಯಕರಲ್ಲ ಎಂದಿದ್ದ ಅರುಣ್ ಸಿಂಗ್ ಈಗ ಅದೇ ಯತ್ನಾಳರೊಂದಿಗೆ ಗಂಭೀರವಾಗಿ ರಹಸ್ಯ ಮಾತುಕತೆ ನಡೆಸಿರುವುದೇಕೆ? ಆ ರಹಸ್ಯ ಏನು? ಬಿಎಸ್ ವೈ ಮೇಲೆ ಇನ್ನಷ್ಟು ದಾಳಿಯ ಸಂಚು ರೂಪಿಸುವುದೇ? ಸಿಎಂ ಹುದ್ದೆಯ ಬಲವಾದ ಆಕಾಂಕ್ಷಿಯಾಗಿರುವ ಯತ್ನಾಳರ ಆಸೆ ಈಡೇರಿಸುವ ಭೇಟಿಯೇ? ಯತ್ನಾಳರೊಂದಿಗೆ ಖಾಸಾ ಖಾಸಾ ಮಾತುಕತೆ ನಡೆಸಿರುವ ಅರುಣ್ ಸಿಂಗ್ ಅವರೇ,ಬಿಜೆಪಿಗೆ ಯತ್ನಾಳ್ ನೀಡಿದ ‘ಬ್ಲಾಕ್ಮೇಲ್ ಜನತಾ ಪಾರ್ಟಿ’ ಎಂಬ ಹೆಸರನ್ನು ಒಪ್ಪುವಿರಾ? ಎಂದು ಟ್ವೀಟ್ ಗಳಲ್ಲಿ ಪ್ರಶ್ನಿಸಿದೆ.
ಸಿಎಂ ಹುದ್ದೆಗೆ 2,500 ಕೋಟಿ ರೂ ಸಲ್ಲಿಸಬೇಕು ಎಂಬ ಹೇಳಿಕೆ ಅನುಮೋದಿಸುತ್ತೀರಾ?ಹಣ ನೀಡಿ ಮಂತ್ರಿಯಾದವರಿದ್ದಾರೆ ಎಂಬ ಯತ್ನಾಳ್ ಆರೋಪ ಒಪ್ಪುವಿರಾ? ಎಂದು ಇನ್ನೊಂದು ಟ್ವೀಟ್ ನಲ್ಲಿ ಪ್ರಶ್ನಿಸಿದೆ.