ಬಾಲಿವುಡ್​ನಲ್ಲೂ ಧೂಳೆಬ್ಬಿಸುತ್ತಿರುವ ಕಾಂತಾರ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಭೇಟಿ ಮಾಡಿದ ಚಿತ್ರತಂಡ

ಬಾಲಿವುಡ್​ನಲ್ಲೂ ಧೂಳೆಬ್ಬಿಸುತ್ತಿರುವ ಕಾಂತಾರ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಭೇಟಿ ಮಾಡಿದ ಚಿತ್ರತಂಡ
 ಸಿನಿಮಾ ಪ್ರೇಕ್ಷಕರು 'ಕಾಂತಾರ' ಚಿತ್ರವನ್ನು ನೋಡಿ ಕಥೆ, ರಿಷಭ್ ನಟನೆ ಬಗ್ಗೆ ಹಾಡಿಹೊಗಳುತ್ತಿದ್ದಾರೆ. ಇದರ ನಡುವೆ ನಿರ್ಮಾಪಕ ವಿಜಯ್ ಕುಮಾರ್ ಕಿರಗಂದೂರು ಮತ್ತು ಹೊಂಬಾಳೆ (Hombale Films) ತಂಡದವರು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿದ್ದಾರೆ.

ರಿಷಬ್​ ಶೆಟ್ಟಿ (Rishab Shetty) ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಸಿನಿಮಾ ಇದೀಗ ದೇಶದ ಎಲ್ಲೆಡೆ ಹವಾ ಸೃಷ್ಟಿ ಮಾಡಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ '

' ಕ್ರಾಂತಿ ಬಾಲಿವುಡ್​ನಲ್ಲೂ ಶುರುವಾಗಿದೆ. ಸಿನಿಮಾ ಪ್ರೇಕ್ಷಕರು 'ಕಾಂತಾರ' ಚಿತ್ರವನ್ನು ನೋಡಿ ಕಥೆ, ರಿಷಭ್ ನಟನೆ ಬಗ್ಗೆ ಹಾಡಿಹೊಗಳುತ್ತಿದ್ದಾರೆ. ಸೆಪ್ಟೆಂಬರ್ 30ರಂದು 'ಕಾಂತಾರ' (Kantara) ರಾಜ್ಯಾದ್ಯಂತ ತೆರೆಕಂಡು ದೊಡ್ಡ ಮಟ್ಟದಲ್ಲಿ ಈಗಲೂ ಸೌಂಡ್ ಮಾಡುತ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕ ಸಮೂಹವನ್ನ ಹೆಚ್ಚಿಸಿಕೊಳ್ಳುತ್ತಿರುವ 'ಕಾಂತಾರ'ದ ಕಲೆಕ್ಷನ್ 100 ಕೋಟಿ ಕ್ಲಬ್ ಸೇರುವ ಎಲ್ಲ ಲಕ್ಷಣಗಳು ಗೋಚರಿಸುತ್ತವೆ. ಇದಕ್ಕೆ ಮುಖ್ಯ ಕಾರಣ ಹಿಂದಿಯಲ್ಲೂ ಕಾಂತಾರ ಅಬ್ಬರ ಜೋರಾಗಿರುವುದು. ಬಾಲಿವುಡ್​ನಲ್ಲಿ ಈ ಸಿನಿಮಾ ಬಿಡುಗಡೆ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಿರ್ಮಾಪಕ ವಿಜಯ್ ಕುಮಾರ್ ಕಿರಗಂದೂರು ಮತ್ತು ಹೊಂಬಾಳೆ (Hombale Films) ತಂಡದವರು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವರು, 'ಹೊಂಬಾಳೆ ಫಿಲಂಸ್ ತಂಡದವರನ್ನು ಭೇಟಿ ಮಾಡಿ, ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದೇನೆ. ಭಾರತವನ್ನು ಜಗತ್ತಿನ ಸಿನಿಮಾ ಹಬ್ ಮಾಡುವ ಹೊಂಬಾಳೆ ಫಿಲಂಸ್‌ನವರ ಯೋಜನೆಗಳನ್ನು ಕೇಳಿ ಖುಷಿಯಾಗಿದೆ,' ಎಂದು ಬರೆದುಕೊಂಡಿದ್ದಾರೆ. ಭೇಟಿಯ ನಂತರ ಮಾತನಾಡಿದ ವಿಜಯ್ ಕುಮಾರ್ ಕಿರಗಂದೂರು, 'ಕೇಂದ್ರ ಸಚಿವ ಅನುರಾಗ ಠಾಕೂರ್ ಅವರೊಂದಿಗೆ ಬಹಳ ಅದ್ಭುತವಾದ ಸಭೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ನಮ್ಮ ಸಂಸ್ಕೃತಿಯನ್ನು ಸಿನಿಮಾಗಳ ಮೂಲಕ ಸಾರುವ ಮತ್ತು ಭಾರತವನ್ನು ವಿಶ್ವದ ಸಿನಿಮಾ ಹಬ್ ಮಾಡುವ ವಿಷಯಗಳೂ ಸೇರಿದಂತೆ ಸಾಕಷ್ಟು ವಿಷಯಗಳನ್ನು ಅವರೊಂದಿಗೆ ಚರ್ಚಿಸಲಾಯಿತು,' ಎಂದು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿಜಯ್ ಜೊತೆ ಚೆಲುವೇಗೌಡ ಹಾಗೂ ಕಾರ್ತಿಕ್ ಗೌಡ ಕೂಡ ಹಾಜರಿದ್ದರು. 

ಹಿಂದಿಯಲ್ಲಿ ಸುಮಾರು 2500 ಸ್ಕ್ರೀನ್‌ಗಳಲ್ಲಿ 'ಕಾಂತಾರ' ರಿಲೀಸ್ ಆಗಿದೆ. ಬಾಲಿವುಡ್​ನಲ್ಲಿ ಕಾಂತಾರಕ್ಕೆ ಮೊದಲ ದಿನದ ರೆಸ್ಪಾನ್ಸ್ ಅದ್ಭುತವಾಗಿದೆ. ಫಸ್ಟ್ ಡೇನೇ ಈ ಸಿನಿಮಾ ಸುಮಾರು 2500 ಸ್ಕ್ರೀನ್‌ಗಳಿಂದ 1.30 ಕೋಟಿ ರೂ. ಯಿಂದ 1.50 ಕೋಟಿ ರೂ. (Net) ಕಲೆಕ್ಷನ್ ಮಾಡಿರಬಹುದು ಎಂದು ಟ್ರೇಡ್ ಅನಲಿಸ್ಟ್‌ಗಳು ಅಂದಾಜು ಮಾಡಿದ್ದಾರೆ. ಒಟ್ಟರೆ ಕರ್ನಾಟಕದಲ್ಲಿ ಕಾಂತಾರ 60 ಕೋಟಿಗೆ ಮೀರಿದ ಕಲೆಕ್ಷನ್ ಅನ್ನ ಎರಡುವಾರಕ್ಕೆ ಮಾಡಿದೆ. ಕರ್ನಾಟಕದಲ್ಲೇ ನಾಲ್ಕು ವಾರ ಮುಗಿಯೋಷ್ಟರಲ್ಲಿ ನೂರು ಕೋಟಿ 'ಕಾಂತಾರ' ಕಲೆಕ್ಷನ್ ಮಾಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ.

ನಟ ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಕರಾವಳಿ ಭಾಗದ ಸೊಗಡಿನ ದೈವದ ಕಥೆ ಆಧರಿಸಿದ್ದಾಗಿದೆ. ವಿಜಯ್​ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ 'ಕಾಂತಾರ' ಚಿತ್ರವನ್ನು ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ರಿಷಬ್​ ಶೆಟ್ಟಿ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಅಚ್ಯುತ್​ ಕುಮಾರ್​, ಪ್ರಮೋದ್​ ಶೆಟ್ಟಿ, ಕಿಶೋರ್ ಮುಂತಾದವರು ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅಜನೀಶ್​ ಬಿ. ಲೋಕನಾಥ್​ ಅವರ ಸಂಗೀತ, ಅರವಿಂದ್​ ಎಸ್​. ಕಶ್ಯಪ್​ ಅವರ ಛಾಯಾಗ್ರಹಣ ಅದ್ಭುತವಾಗಿ ಮೂಡಿಬಂದಿದೆ.