ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪಹಣಿ ತಿದ್ದುಪಡಿ'ಗೆ ತಹಶೀಲ್ದಾರ್ ಅಧಿಕಾರ ಅವಧಿ ವಿಸ್ತರಣೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಮೂರು ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯಾಧ್ಯಂತ ಎಲ್ಲಾ ತಾಲೂಕುಗಳ ಗ್ರಾಮಲೆಕ್ಕಾಧಿಕಾರಿಗಳ ವೃತ್ತ ಮಟ್ಟದಲ್ಲಿ ಕಂದಾಯ ಅದಾಲತ್ ಗಳನ್ನು ನಡೆಸಿ, ಪಹಣಿಗಳ ಲೋಪದೋಷಗಳನ್ನು ಸರಿಪಡಿಸುವ ಅವಧಿಯನ್ನು ದಿನಾಂಕ 31-12-2023ರವರೆಗೆ ವಿಸ್ತರಿಸಿ ಆದೇಶಿಸಿದೆ.
ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಗಳು ನಡವಳಿಗಳನ್ನು ಹೊರಡಿಸಿದ್ದಾರೆ. ಸರ್ಕಾರ ಹೊರಡಿಸಿರುವಂತ ಆದೇಶದಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರರಿಗೆ ಪ್ರತ್ಯಾಯೋಜಿಸುವ ಅವಧಿಯನ್ನು ವಿಸ್ತರಿಸಿರೋದಾಗಿ ತಿಳಿಸಿದ್ದಾರೆ.
ಕಂದಾಯ ಅದಾಲತ್ ಕಾರ್ಯಕ್ರಮದಡಿಯಲ್ಲಿ ಬಾಕಿ ಇರುವ ಹಾಗೂ ಸ್ವೀಕೃತವಾಗುವ ಅರ್ಜಿಗಳನ್ನು ದಿನಾಂಕ 31-12-2023ರ ಅಂತ್ಯಕ್ಕೆ ತಿದ್ದುಪಡಿ ಮಾಡಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ತಪ್ಪಿದ್ದಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಯಾವುದೇ ಕಾರಮಕ್ಕೂ ವಿಸ್ತರಿಸುವುದಿಲ್ಲವೆಂದಿದೆ.
ಕಂದಾಯ ಇಲಾಖೆಯ ಅತಿ ಮುಖ್ಯ ಕೆಲಸಗಳಲ್ಲೊಂದಾಗಿದ್ದು, ಪಹಣಿಗಳಲ್ಲಿನ ಲೋಪದೋಷಗಳ ತಿದ್ದುಪಡಿ ಮತ್ತು ಕಾಲೋಚಿತಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದ್ದು, ಜಿಲ್ಲಾಧಿಕಾರಿಗಳು ತಪ್ಪದೇ ಪ್ರತಿವಾರ ಕಂದಾಯ ಅದಾಲತ್ ಗೆ ಸಂಬಂಧಿಸಿದಂತೆ ಪ್ರತಿ ತಾಲೂಕಿನ ತಹಶೀಲ್ದಾರ್ ಅವರ ಪ್ರಗತಿ ಪರಿಶೀಲಿಸಿ, ಅತಿ ಹೆಚ್ಚು ಪಹಣಿ ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಹೇಳಿದ್ದಾರೆ.