ಪವಿತ್ರ ಮೃತ್ತಿಕೆ ಸಂಗ್ರಹಣೆ: ಮಲ್ಲೇಶ್ವರಂನಲ್ಲಿ ಮೂರ್ತಿವೆತ್ತ ನಾಡಪ್ರಭುವಿನ ಸ್ಮರಣೆ

ಪವಿತ್ರ ಮೃತ್ತಿಕೆ ಸಂಗ್ರಹಣೆ: ಮಲ್ಲೇಶ್ವರಂನಲ್ಲಿ ಮೂರ್ತಿವೆತ್ತ ನಾಡಪ್ರಭುವಿನ ಸ್ಮರಣೆ

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆಯ ಭಾಗವಾಗಿ ನಡೆಯುತ್ತಿರುವ ರಾಜ್ಯ ಮಟ್ಟದ ಪವಿತ್ರ ಮೃತ್ತಿಕೆ ಸಂಗ್ರಹಣಾ ಕಾರ್ಯವು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾನುವಾರ ಮೇರೆ ಮೀರಿದ ಉತ್ಸಾಹದಿಂದ ನಡೆಯಿತು.

ಸ್ವತಃ ಕೆಂಪೇಗೌಡರೇ ಮೂರ್ತಿವೆತ್ತಂತೆ ಭಾಸವಾಗುತ್ತಿದ್ದ ಉತ್ಸವದ ವಾತಾವರಣದಲ್ಲಿ ನಿರೀಕ್ಷೆಗೂ ಮೀರಿದ ಜನಸಾಗರವು ಪಾಲ್ಗೊಂಡು ರೋಮಾಂಚನವನ್ನು ಅನುಭವಿಸಿತು.

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಸ್ಥಳೀಯ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಇದನ್ನೆಲ್ಲ ಕಣ್ತುಂಬಿಕೊಂಡು, ಪುಳಕಿತರಾದರು. ಪವಿತ್ರ ಮೃತ್ತಿಕೆಯನ್ನು ಸಚಿವರಿಗೆ ಹಸ್ತಾಂತರಿಸಿದ ಕ್ಷೇತ್ರದ ನಾಗರಿಕರು ಧನ್ಯತೆಯ ಭಾವವನ್ನು ಅನುಭವಿಸಿದರು.

ಮೊದಲಿಗೆ ಮತ್ತೀಕೆರೆಯ ನೇತಾಜಿ ವೃತ್ತದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಪೂಜೆ ಸಲ್ಲಿಸಿ, ಪವಿತ್ರ ಮೃತ್ತಿಕೆ ಸಂಗ್ರಹಣೆಗೆ ಚಾಲನೆ ನೀಡಿದರು. ನಂತರದ ಕೆಲವೇ ನಿಮಿಷಗಳಲ್ಲಿ ಅಶ್ವತ್ಥನಾರಾಯಣ ಜತೆಗೂಡಿದರು. ಮೊದಲು ಮತ್ತೀಕೆರೆ 3ನೇ ಮುಖ್ಯರಸ್ತೆಯಲ್ಲಿ ಹೆಜ್ಜೆ ಇಟ್ಟ ಕೆಂಪೇಗೌಡರ ಅಭಿಮಾನಿಗಳು, ನಂತರ 1ನೇ ಮುಖ್ಯರಸ್ತೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದರು. ಮಧ್ಯದಲ್ಲಿ ಅಶ್ವತ್ಥನಾರಾಯಣ ಅವರು, ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸಿ, ನಮಿಸಿದರು.

ನಂತರ ಮೆರವಣಿಗೆಯು ಕೆ.ಎನ್‌ ಬಡಾವಣೆ, ಸುಬೇದಾರ್ ಪಾಳ್ಯ, ದಿವಾನರ ಪಾಳ್ಯ, ತ್ರಿವೇಣಿ ರಸ್ತೆ, ಸಂವಿಧಾನ ವೃತ್ತಗಳಲ್ಲಿ ಸಾಗಿಬಂದಿತು. ದಾರಿಯುದ್ದಕ್ಕೂ ಅಲ್ಲಲ್ಲಿ ಇರುವ ದೇವಸ್ಥಾನಗಳ ಬಳಿ ನಾಡಪ್ರಭುವಿನ ರಥಗಳಿಗೆ ಪೂರ್ಣಕುಂಭ ಸ್ವಾಗತ ಕೊಡಲಾಯಿತು. ವಿಶೇಷವಾಗಿ, ಮತ್ತೀಕೆರೆಯ ಮುಸ್ಲಿಂ ಬಾಂಧವರು ಕೂಡ ಅಪಾರ ಸಂಖ್ಯೆಯಲ್ಲಿ ಈ ಅಭಿಯಾನದ ಜತೆ ಏಕೋಭಾವದಿಂದ ಸೇರಿಕೊಂಡು, ಸಮರಸತೆಯ ಸಂದೇಶವನ್ನು ಸಾರಿದರು.

ನಂತರ ರಾಜಕುಮಾರ್ ರಸ್ತೆ, ಸುಬ್ರಹ್ಮಣ್ಯ ನಗರ, ನಾಗರಾಜ್‌ ರಸ್ತೆ, ಸಿ ಎಂ ನಾಗರಾಜ್‌ ರಸ್ತೆ, ಗಾಯತ್ರೀನಗರದ ತರಾಸು ರಸ್ತೆಯ ಮೂಲಕ ಇನ್ನೊಂದು ಸುತ್ತಿನ ಮೆರವಣಿಗೆ ನಡೆದು, ಮಹಾಕವಿ ಕುವೆಂಪು ರಸ್ತೆಯಲ್ಲಿ ಸಂಪನ್ನಗೊಂಡಿತು. ಈ ಮಾರ್ಗದಲ್ಲಂತೂ ಜನರು ಕಿಕ್ಕಿರಿದು ಜಮಾಯಿಸಿದ್ದರು. ಹಾದಿಯುದ್ದಕ್ಕೂ ನಗರದ ಜನರು ಹೂವಿನ ಮಳೆಗರೆಯುವ ಜತೆಗೆ ಜಯಘೋಷಗಳ ಅನುರಣನ ಮೊಳಗುವಂತೆ ಮಾಡಿದರು.

ದೇವಸ್ಥಾನಗಳಲ್ಲಿ ನಿರೀಕ್ಷೆಗೂ ಹೆಚ್ಚಿನ ಜನರು ತಾವು ತಂದಿದ್ದ ಪವಿತ್ರ ಮೃತ್ತಿಕೆಯ ಕುಂಭಗಳನ್ನು ಸಚಿವರಿಗೆ ಒಪ್ಪಿಸಿದರು. ಈ ಸಾಲಿನಲ್ಲಿ ಅರ್ಚಕರು, ಮಹಿಳೆಯರು, ಜನಸಾಮಾನ್ಯರು, ಬಡಾವಣೆಗಳ ಪ್ರಮುಖರೆಲ್ಲ ಇದ್ದರು.

ಕೊನೆಯ ಚರಣದಲ್ಲಿ ಮೃತ್ತಿಕೆ ಸಂಗ್ರಹವು ಮಲ್ಲೇಶ್ವರಂ ವೃತ್ತದಲ್ಲಿರುವ ಕುವೆಂಪು ಪ್ರತಿಮೆಯ ಬಳಿಯಿಂದ ಆರಂಭವಾಯಿತು. ಮಲ್ಲೇಶ್ವರಂನ ದೇವಸ್ಥಾನಗಳ ಒಕ್ಕೂಟದ ಮುಖ್ಯಸ್ಥರಾದ ಹರೀಶ್‌ ಪಂಡಿತ್‌ ಅವರ ನೇತೃತ್ವದಲ್ಲಿ ಎಲ್ಲ ದೇಗುಲಗಳ ಅರ್ಚಕರು, ಭಕ್ತಾದಿಗಳು, ಆಡಳಿತ ಮಂಡಳಿಯವರು, ಮಹಿಳೆಯರು, ಸಾರ್ವಜನಿಕರು, ವ್ಯಾಪಾರಿಗಳು, ಪ್ರಮುಖರು ಮೃತ್ತಿಕೆಯನ್ನು ಅಶ್ವತ್ಥನಾರಾಯಣ ಅವರಿಗೆ ಪ್ರದಾನ ಮಾಡಿದರು. ಕೋದಂಡರಾಮಪುರ, ಲಕ್ಷ್ಮೀನಾರಾಯಣ ಪುರ ಇತ್ಯಾದಿಗಳ ಭಾಗದ ಎಲ್ಲಾ ಬಿಬಿಎಂಪಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಕೂಡ ಅಭಿಯಾನದಲ್ಲಿ ಮೃತ್ತಿಕೆಯನ್ನು ಕೊಟ್ಟರು.

ಇಲ್ಲಿಂದ ಸಂಪಿಗೆ ರಸ್ತೆಯುದ್ದಕ್ಕೂ ಸಾಗಿದ ಮೆರವಣಿಗೆಯು ಬಳಿಕ 18ನೇ ಅಡ್ಡರಸ್ತೆಯಲ್ಲಿರುವ ಗೋಕಾಕ್‌ ಚಳವಳಿ ಸ್ಮರಣಾರ್ಥ ಉದ್ಯಾನದಲ್ಲಿ ಸಂಪನ್ನಗೊಂಡಿತು. ಅಷ್ಟು ಹೊತ್ತಿಗಾಗಲೇ ಕತ್ತಲು ಕವಿದಿದ್ದರೂ ನೆರೆದಿದ್ದ ಜನರ ಮೊಗದಲ್ಲಿ ಕೆಂಪೇಗೌಡರ ಸ್ಮರಣೆಯ ತರಂಗಗಳು ಸುತ್ತಲಿನ ವಾತಾವರಣವನ್ನು ಆವರಿಸಿಕೊಂಡಿದ್ದವು.

ಮೆರವಣಿಗೆಯಲ್ಲಿ ಬಿಜೆಪಿ ಮುಖಂಡರಾದ ಮಂಜುನಾಥ ರಾಜು, ಜಯಪಾಲ್‌, ಡಾ.ವಾಸು, ಕೇಶವಮೂರ್ತಿ, ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯ ಸಮೀವುಲ್ಲಾ ಮುಂತಾದ ಪ್ರಮುಖರು ಬಿರುಸಿನಿಂದ ಹೆಜ್ಜೆ ಹಾಕಿದರು.