ಪತಿ ಜತೆ ಒಗ್ಗಟ್ಟಿನಿಂದ ಇದ್ದೇನೆ: ರೂಪಾ

ಪತಿ ಜತೆ ಒಗ್ಗಟ್ಟಿನಿಂದ ಇದ್ದೇನೆ: ರೂಪಾ

ಬೆಂಗಳೂರು: 'ನಾನು, ನನ್ನ ಪತಿ ಒಗ್ಗಟ್ಟಿನಿಂದ ಇದ್ದೇವೆ. ಊಹಾಪೋಹ ಬೇಡ. ಕುಟುಂಬಕ್ಕೆ ಅಡ್ಡಿಪಡಿಸಲು ದುಷ್ಟತನ ಪ್ರದರ್ಶಿಸುವವರನ್ನು ಪ್ರಶ್ನಿಸಿ...'

ಆರ್‌ಟಿಐ ಕಾರ್ಯಕರ್ತ ಎನ್‌. ಗಂಗರಾಜು ಜತೆ ಮಾತನಾಡಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಐಪಿಎಸ್‌ ಅಧಿಕಾರಿ ಡಿ.

ರೂಪಾ ಫೇಸ್‌ಬುಕ್‌ನಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಕುಟುಂಬ, ಭ್ರಷ್ಟಾಚಾರ ವಿರುದ್ಧ ಹೋರಾಟದ ವಿಷಯವನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ.

ಫೇಸ್‌ಬುಕ್‌ ಪೋಸ್ಟ್‌ನಲ್ಲಿರುವುದು ಏನು?: 'ಮಾಧ್ಯಮಗಳೇ ದಯವಿಟ್ಟು ಐಎಎಸ್‌ ರೋಹಿಣಿ ಸಿಂಧೂರಿ ಅವರ ವಿರುದ್ಧ ನಾನು ಎತ್ತಿರುವ ಭ್ರಷ್ಟಾಚಾರದ ವಿಷಯದ ಮೇಲೆ ಫೋಕಸ್‌ ಮಾಡಿ. ಜನಸಾಮಾನ್ಯರ ಬದುಕಿನ ಮೇಲೆ ಅತ್ಯಂತ ಪರಿಣಾಮ ಬೀರುವ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಯಾರನ್ನೂ ನಾನು ತಡೆದಿಲ್ಲ' ಎಂದು ಡಿ. ರೂಪಾ ವಿವರಿಸಿದ್ದಾರೆ.

'ಇದೇ ಸಂದರ್ಭದಲ್ಲಿ ನೀವು ಒಂದೇ ಮಾದರಿಯಲ್ಲಿ ನಡೆಯುತ್ತಿರುವ ದುರಂತಗಳ ಬಗ್ಗೆಯೂ ತನಿಖೆ ನಡೆಯಬೇಕು. ಕರ್ನಾಟಕದಲ್ಲಿ ಒಬ್ಬ ಅಧಿಕಾರಿ ಸಾವಿಗೀಡಾಗುತ್ತಾರೆ. ತಮಿಳುನಾಡಿನಲ್ಲಿ ಒಬ್ಬ ಐಪಿಎಸ್‌ ಅಧಿಕಾರಿ ಸಾವಿಗೀಡಾಗುತ್ತಾರೆ. ಕರ್ನಾಟಕದಲ್ಲಿ ಐಎಎಸ್‌ ಪತಿ ಮತ್ತು ಪತ್ನಿ ಈಗಾಗಲೇ ವಿಚ್ಛೇದನ ಪಡೆದಿದ್ದಾರೆ' ಎಂದು ಬರೆದಿದ್ದಾರೆ.

'ನಾನು ಬಲಿಷ್ಠ ಮಹಿಳೆ. ಎಲ್ಲ ಮಹಿಳೆಯರಿಗೂ ಹೋರಾಟ ಮಾಡುವ ಶಕ್ತಿ ಇರುವುದಿಲ್ಲ. ದಯವಿಟ್ಟು ಅಂಥ ಮಹಿಳೆಯರಿಗೆ ಧ್ವನಿಯಾಗಿ. ಇಂತಹ ಮೌಲ್ಯಗಳನ್ನು ಉಳಿಸಿಕೊಳ್ಳೋಣ' ಎಂದಿದ್ದಾರೆ.