ಕ್ರೈಸ್ತ ಸಮುದಾಯದಿಂದ ಬೃಹತ್ ಪ್ರತಿಭಟನೆ
ಕ್ರೈಸ್ತ ಸಮುದಾಯದವರ ಮೇಲೆ ನಡೆಯುತ್ತಿರುವುದಾಗಿ, ಹಲ್ಲೆ ಖಂಡನೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಕ್ರೈಸ್ತ ಸಭಾಪಾಲಕರು ಮತ್ತು ನಾಯಕರ ಒಕ್ಕೂಟದ ವತಿಯಿಂದ ಹುಬ್ಬಳ್ಳಿ ಚನ್ನಮ್ಮ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಯಿತು.ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕ್ರೈಸ್ತ ಸಮುದಾಯದವರ ಮೇಲೆ ನಡೆದ ಹಲ್ಲೆ ಪ್ರಕರಣ ಖಂಡಿಸಿ ಹಾಗೂ ಮತಾಂತರ ನಿಷೇಧ ಕಾಯ್ದೆ ಕೈಬಿಡುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾ ಕ್ರೈಸ್ತ ಸಭಾಪಾಲಕರು ಮತ್ತು ನಾಯಕರ ಒಕ್ಕೂಟದ ವತಿಯಿಂದ ಸೋಮವಾರ ಈ ಬೃಹತ್ ಪ್ರತಿಭಟನೆ ನಡೆಯಿತು. ಗದಗ ರಸ್ತೆಯ ಪೀಟರ್ ಚರ್ಚ್ ಆವರಣದಿಂದ ಆರಂಭವಾದ ಮೆರವಣಿಗೆ ಚನ್ನಮ್ಮ ವೃತ್ತದ ಮೂಲಕ ಸಾಗಿ ಮಿನಿ ವಿಧಾನ ಸೌಧಕ್ಕೆ ತಲುಪಿತು. ಮೆರವಣಿಗೆಯುದ್ದಕ್ಕೂ ಮೌನವಾಗಿಯೇ ಇದ್ದ ಪ್ರತಿಭಟನಾಕಾರರು, ಮಿನಿವಿಧಾನ ಸೌಧದ ಆವರಣ ಪ್ರವೇಶಿಸುತ್ತಿದ್ದಂತೆ ನ್ಯಾಯಕ್ಕಾಗಿ ಘೋಷಣೆ ಕೂಗಿದರು. ತಹಶೀಲ್ದಾರ್ಗೆ ಮನವಿ ಸಲ್ಲಿಸಿ, ಕ್ರೈಸ್ತ ಸಮುದಾಯದವರ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ಒಕ್ಕೂಟದ ಅಧ್ಯಕ್ಷ ಸುನಿಲ ಮಹಾಡೆ ಮಾತನಾಡಿ, ‘ಕ್ರೈಸ್ತ ಸಮುದಾಯದವರು ಬಲವಂತಾಗಿ ಅಮಾಯಕರನ್ನು ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆ ಕುರಿತು ಒಂದೇ ಒಂದು ದಾಖಲೆಯಿಲ್ಲ. ಎಲ್ಲಿಯೂ ಪ್ರಕರಣ ಸಹ ದಾಖಲಾಗಿಲ್ಲ. ನಾವು ಭಾರತೀಯರು, ಸಂವಿಧಾನ ಬದ್ಧವಾಗಿ ಬದುಕು ನಡೆಸುತ್ತೇವೆ. ಸುಳ್ಳು ಆರೋಪ ಮಾಡಿ ನಮ್ಮ ಸಮುದಾಯದ ಮೇಲೆ ಗೂಬೆ ಕೂರಿಸಬೇಡಿ. ಅನಧಿಕೃತ ಚರ್ಚ್, ಅಧಿಕೃತ ಚರ್ಚ್ ಕುರಿತು ಸಮೀಕ್ಷೆ ನಡೆಸಲು ಹೇಳುತ್ತೀರಿ. ಹಾಗಾದರೆ, ಇಲ್ಲಿ ಬೇರೆ ಧರ್ಮದವರ ಮಂದಿರಗಳಿಲ್ಲವೇ? ಇದು ಕ್ರೈಸ್ತ ಸಮುದಾದವರನ್ನು ಹತ್ತಿಕ್ಕುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡ ಕ್ಯಾಡ್ರಿಕ್ ಜಾಕೋಬ್ ಮಾತನಾಡಿ, ‘ಕೆಲವು ಮತೀಯ ಸಂಘಟನೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರೈಸ್ತ ಸಮುದಾಯ ಹತ್ತಿಕ್ಕುವ ಯತ್ನ ಮಾಡುತ್ತಿವೆ. ನಾವೆಲ್ಲ ಕ್ರೈಸ್ತನ ಅನುಯಾಯಿಗಳು. ಅವನ ಬೋಧನೆ ಪಾಲನೆ ಮಾಡುತ್ತಿದ್ದೇವೆ. ಯಾರಿಗೂ ಉಪದ್ರವ ಮಾಡದೆ, ಸಮಾಜದ ಉದ್ಧಾರಕ್ಕೆ ಶ್ರಮಿಸುತ್ತಿದ್ದೇವೆ. ಕುಡುಕನನ್ನು ತಿರುಗಿಯೂ ನೋಡದ ನೀವು, ನಾವು ಅವನ ಮನಸ್ಸು ಪರಿವರ್ತನೆ ಮಾಡಿ ಹೊಸ ಬದುಕು ನೀಡುತ್ತೇವೆ. ಕ್ರೈಸ್ತರ ವಿರುದ್ಧದ ಪ್ರತಿಯೊಂದು ಚಟುವಟಿಕೆ ವಿರೋಧಿಸುತ್ತ, ಸಂವಿಧಾನ ಎತ್ತಿ ಹಿಡಿಯುವ ಕೆಲಸ ಮಾಡುತ್ತೇವೆ ಎಂದರು.ಪಾಲಿಕೆ ಸದಸ್ಯರಾದ ದೊರಾಜ ಮಣಿಕುಂಟ್ಲ, ಸುವರ್ಣಾ ಕಲಕುಂಟ್ಲ ಹಾಗೂ ಮುಖಂಡರಾದ ಸುಧಾ ಮಣಿಕುಂಟ್ಲ, ಡಾ. ಸೊಲೊಮಾನ್ ಬಿಜ್ಜ, ಡಾ. ಡ್ಯಾನಿಯಲ್ ಕೋಟಿ, ತಿಮ್ಮೋತಿ ಬುರ್ಗಾ, ಡ್ಯಾನಿಯಲ್ ಪ್ಯಾಂಡ್ರಮ್, ಹುಧಾ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ಇದ್ದರು. ನ್ಯಾಯಕ್ಕಾಗಿ ಬೇಡಿಕೆಯಿರುವ ವಿವಿಧ ನಾಮಫಲಕಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಿದರು. ಬೆಳಗಾವಿ, ಹಾವೇರಿ, ಗದಗ, ಮೈಸೂರು, ಮಂಗಳೂರು ಭಾಗಗಳಿಂದ ಕ್ರೈಸ್ತ ಸಮುದಾಯದವರು ಹಾಗೂ ತೆಲಂಗಾಣದ ರಾಷ್ಟ್ರೀಯ ಕ್ರೈಸ್ತ ಪರಿಷತ್ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮೂರು ಸಾವಿರದಷ್ಟು ಮಂದಿ ಪಾಲ್ಗೊಂಡಿದ್ದರು. ಸುಮಾರು ಒಂದು ಕಿ.ಮೀ. ಉದ್ದದ ಮೆರವಣಿಗೆಯಿಂದಾಗಿ ಸ್ಟೇಷನ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಚನ್ನಮ್ಮ ವೃತ್ತದ ಸುತ್ತ ವಾಹನಗಳ ಸಂಚಾರ ದಟ್ಟಣೆ ಉಂಟಾಗಿತ್ತು.