ಗುಂಡ್ಲುಪೇಟೆ| ಗಣೇಶ್‌ ಪ್ರಸಾದ್‌ ಅಭ್ಯರ್ಥಿ: ಬೆಂಬಲಿಗರಲ್ಲಿ ರಣೋತ್ಸಾಹ

ಗುಂಡ್ಲುಪೇಟೆ| ಗಣೇಶ್‌ ಪ್ರಸಾದ್‌ ಅಭ್ಯರ್ಥಿ: ಬೆಂಬಲಿಗರಲ್ಲಿ ರಣೋತ್ಸಾಹ

ಗುಂಡ್ಲುಪೇಟೆ: ಪಕ್ಷದ ಬಹುತೇಕ ಕಾರ್ಯಕರ್ತರ ನಿರೀಕ್ಷೆಯಂತೆ ಮುಂದಿನ ಚುನಾವಣೆಗೆ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಎಚ್‌.ಎಂ.ಗಣೇಶ್‌ ಪ್ರಸಾದ್‌ ಅವರೇ ಅಭ್ಯರ್ಥಿ ಎಂಬ ಸಂದೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರವಾನಿಸಿರುವುದು ಅವರ ಬೆಂಗಲಿಗರು ಹಾಗೂ ಸ್ಥಳೀಯ ಯುವ ಮುಖಂಡರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.

ಮಂಗಳವಾರ ರಾತ್ರಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಮ್ಮುಖದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಣೆ ಮಾಡುತ್ತಿದ್ದಂತೆ ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮಿಸಿದರು.

ವಿಧಾನಸಭಾ ಕ್ಷೇತ್ರದ ಚುನಾವಣಾ ಟಿಕೆಟ್‌ಗಾಗಿ, ಗಣೇಶ್‌ ಪ್ರಸಾದ್‌ ಅವರೊಂದಿಗೆ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಎಸ್.ನಂಜಪ್ಪ ಕೂಡ ಅರ್ಜಿ ಹಾಕಿದ್ದರು. ಹಾಗಾಗಿ, ಟಿಕೆಟ್‌ಗಾಗಿ ಪೈಪೋಟಿ ಇತ್ತು. ಕ್ಷೇತ್ರದ ಮೇಲೆ ರಾಜಕೀಯವಾಗಿ ಬಿಗಿ ಹಿಡಿದ ಹೊಂದಿದ್ದ ದಿವಂಗತ ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರ ಕುಟುಂಬದ ಬಗ್ಗೆ ಈಗಲೂ ಇಲ್ಲಿನ ಜನರಿಗೆ ಒಲವಿದೆ. ಹಾಗಾಗಿ, ಅವರ ಮಗ ಗಣೇಶ್‌ ಪ್ರಸಾದ್‌ ಅವರಿಗೆ ಟಿಕೆಟ್‌ ನೀಡಬೇಕು ಎಂಬುದು ಬಹುತೇಕ ಮುಖಂಡರ ಹಾಗೂ ಕಾರ್ಯಕರ್ತರ ಆಕಾಂಕ್ಷೆಯಾಗಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಕೂಡ ಗಣೇಶ್‌ ‍ಪ್ರಸಾದ್‌ ಅವರ ಮೇಲೆಯೇ ಒಲವು ತೋರಿದ್ದರು.

ಕಾರ್ಯಕರ್ತರ ಮನದ ಇಂಗಿತವನ್ನು ಅರಿತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಗಣೇಶ್‌ ಪ್ರಸಾದ್‌ ಅವರನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ. ಸಮಾವೇಶಗಳಲ್ಲಿ ಬಹಿರಂಗವಾಗಿ ಯಾರೂ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಬಾರದು ಎಂಬ ನಿರ್ಧಾರವನ್ನು ಕೆಪಿಸಿಸಿ ತೆಗೆದುಕೊಂಡಿದ್ದರೂ, ಗುಂಡ್ಲುಪೇಟೆಯಲ್ಲಿ ಶಿವಕುಮಾರ್‌ ಗಣೇಶ್‌ ಪ್ರಸಾದ್‌ ಅವರನ್ನು ವೇದಿಕೆಗೆ ಕರೆದು ಅವರ ಕೈ ಎತ್ತಿ ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ.

ಎಚ್‌.ಎಸ್‌.ಮಹದೇವಪ್ರಸಾದ್‌ ನಿಧನದ ನಂತರ 2017ರ ಏಪ್ರಿಲ್‌ 9ರಂದು ನಡೆದಿದ್ದ ಉಪಚುನಾವಣೆಯಲ್ಲಿ ಅವರ ಪತ್ನಿ ಎಂ.ಸಿ.ಮೋಹನಕುಮಾರಿ ಅವರು ಸ್ಪರ್ಧಿಸಿ ಗೆದ್ದು, ಮಂತ್ರಿಯೂ ಆದರು. 2018ರಲ್ಲಿ ಮತ್ತೆ ಸ್ಪರ್ಧಿಸಿದ್ದರು. ಆದರೆ, ಬಿಜೆಪಿಯ ನಿರಂಜನಕುಮಾರ್‌ ಎದುರು ಸೋತರು. ಆ ಬಳಿಕ ರಾಜಕೀಯದಿಂದ ಹಿಂದೆ ಸರಿಯುವ ಆಶಯವನ್ನು ಮೋಹನಕುಮಾರಿ ಅವರು ವ್ಯಕ್ತಪಡಿಸಿದಾಗ ಮಗ, ಗಣೇಶ್‌ ಪ‍್ರಸಾದ್‌ ಮುನ್ನಲೆಗೆ ಬಂದರು.

ತಂದೆ ರಾಜಕೀಯದಲ್ಲಿದ್ದರೂ, ಗಣೇಶ್‌ ಪ್ರಸಾದ್‌ ಅವರಿಗೆ ರಾಜಕೀಯ ಹೊಸದಾಗಿತ್ತು. ಸೋಲಿಗೆ ಹೆದರದೆ ಕ್ಷೇತ್ರದ ಜನರನ್ನು ಭೇಟಿ ಮಾಡಿ, ಸತತ ಸಂಪರ್ಕದಲ್ಲಿ ಇರುವಂತೆ ಸಿದ್ದರಾಮಯ್ಯ ಹಾಗೂ ಇತರ ನಾಯಕರ ಸಲಹೆಯನ್ನು ಪಾಲಿಸಿದ ಗಣೇಶ್‌ ಪ್ರಸಾದ್ ನಾಲ್ಕೂವರೆ ವರ್ಷಗಳಿಂದ ಸತತವಾಗಿ ಜನರ ಸಂಪರ್ಕದಲ್ಲಿದ್ದಾರೆ. ಕೋವಿಡ್‌ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ, ಮೃತಪಟ್ಟವರ ಕುಟುಂಬಗಳಿಗೆ ವೈಯಕ್ತಿಕವಾಗಿ ಸಹಾಯ ಮಾಡಿ, ಜನರ ಮಧ್ಯೆ ಗುರುತಿಸಿಕೊಂಡಿದ್ದಾರೆ.

'ಪ್ರತಿ ಗ್ರಾಮಗಳಿಗೆ ಬೇಟಿ ನೀಡುತ್ತ ಸಾವು ಸಂಕಟ, ಹಬ್ಬ, ದೇವಸ್ಥಾನದ ಉತ್ಸವ, ಅನಾರೋಗ್ಯದ ಸಮಸ್ಯೆ ಇರುವವರಿಗೆ ಕೈಲಾದ ಸಹಾಯ ಮಾಡುತ್ತ ಕ್ಷೇತ್ರದ ಜನರಿಗೆ ಪರಿಚಿತರಾಗಿದ್ದಾರೆ. ಕಷ್ಟ ಎಂದು ಹೇಳಿಕೊಂಡು ಅವರ ಬಳಿ ಹೋದವರು ಬರಗೈಲಿ ಬಂದ ಉದಾಹರಣೆ ಇಲ್ಲ' ಎಂದು ಹೇಳುತ್ಥಾರೆ ಅವರ ಬೆಂಬಲಿಗರು.

'ಒಟ್ಟಿನಲ್ಲಿ ಜನ ಬೆಂಬಲ ಹೆಚ್ಚಿರುವ ಗಣೇಶ್ ಪ್ರಸಾದ್ ಅವರಿಗೆ ನಿರೀಕ್ಷೆಯಂತೆ ಟಿಕೆಟ್ ಘೋಷಣೆ ಆಗಿರುವುದು ಎಲ್ಲ ಬೆಂಬಲಿಗರಿಗೆ ಖುಷಿ ತಂದಿದೆ. ಅವರ ಗೆಲುವಿಗಾಗಿ ಕಷ್ಟ ಪಟ್ಟು ದುಡಿಯುತ್ತೇವೆ' ಎಂದು ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸಾಹುಲ್ ಹಮೀದ್ 'ಪ್ರಜಾವಾಣಿ'ಗೆ ತಿಳಿಸಿದರು.

'ಮನೆ ಮನೆಗೆ ಭೇಟಿ ನೀಡುವೆ'

'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಎಚ್‌.ಎಂ.ಗಣೇಶ್‌ ಪ್ರಸಾದ್‌, 'ಕೋವಿಡ್‌ ಸಂದರ್ಭದಲ್ಲಿ ಪ್ರತಿ ಹಳ್ಳಿಯ ಬಡಜನರಿಗೆ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಜನರ ಪ್ರತಿಕ್ರಿಯೆ ಉತ್ತಮವಾಗಿತ್ತು. ಸಿದ್ದರಾಮಯ್ಯ ಅವರು ಕೂಡ, 'ಅಧಿಕಾರ ಇಲ್ಲದಿದ್ದರೂ ಪರವಾಗಿಲ್ಲ, ಪ್ರತಿ ಹಳ್ಳಿಗೆ ಭೇಟಿ ನೀಡು. ನಿನ್ನ ಪರಿಚಯ ಆಗುತ್ತದೆ' ಎಂದು ತಿಳಿಸಿದ್ದರು. ಅದರಂತೆ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಜನರೊಂದಿಗೆ ಬೆರೆತಿದ್ದೇನೆ. ಚುನಾವಣೆಗೆ ಸಿದ್ಧತೆಯನ್ನೂ ನಡೆಸುತ್ತಿದ್ದು, ಮಾರ್ಚ್‌ ಆರಂಭದಿಂದ ಪ್ರತಿ ಗ್ರಾಮಗಳ ಮನೆ ಮನೆಗೆ ಭೇಟಿ ಮಾಡುತ್ತೇವೆ' ಎಂದರು.

ಎಲ್ಲರಿಗೂ ಸಮಾಧಾನವಿಲ್ಲ‌...

ಗಣೇಶ್‌ ಪ್ರಸಾದ್‌ ರಾಜಕೀಯದಲ್ಲಿ ಇನ್ನೂ ಯುವಕರಾಗಿರುವುದರಿಂದ ಅವರನ್ನು ಮುಂಚೂಣಿಗೆ ತಂದಿರುವುದು ಕ್ಷೇತ್ರದಲ್ಲಿ ಪಕ್ಷದ ಮೊದಲ ಸಾಲಿನ ಹಲವು ಮುಖಂಡರಿಗೆ ಸಮಾಧಾನ ತಂದಿಲ್ಲ ಎನ್ನುತ್ತವೆ ಪಕ್ಷದ ಮೂಲಗಳು. ಆದರೆ, ಯಾರೂ ಬಹಿರಂಗವಾಗಿ ಇದನ್ನು ತೋರ್ಪಡಿಸಿಕೊಳ್ಳುತ್ತಿಲ್ಲ. ಹಿರಿಯ ಮುಖಂಡರನ್ನೂ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಅವರಿಗಿರುವ ಅಸಮಾಧಾನ.

ಗಣೇಶ್‌ ಪ್ರಸಾದ್‌ ಆಪ್ತರೂ ಇದನ್ನು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.

'ಆ ತಪ್ಪುಗಳನ್ನು ಸರಿಪಡಿಸಿಕೊಂಡು ನಮ್ಮ ನಾಯಕರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಲಿದ್ದಾರೆ' ಎಂದು ಹೇಳುತ್ತಾರೆ ಅವರು.