ನಾಡಪ್ರಭು ಕೆಂಪೇಗೌಡರ ವಿಚಾರಧಾರೆಗಳ ಹಾದಿಯಲ್ಲಿ ನಡೆಯುವ ಸಂಕಲ್ಪ - ಸಿಎಂ ಬೊಮ್ಮಾಯಿ
ಬೆಂಗಳೂರು : ಕೆಂಪೇಗೌಡರ ಚಿಂತನೆ ಹಾಗೂ ವಿಚಾರಧಾರೆಗಳ ಹಾದಿಯಲ್ಲಿ ನಡೆದು ಕರ್ನಾಟಕವನ್ನು ಅಭಿವೃದ್ಧಿಗೊಳಿಸುವ ಸಂಕಲ್ಪವನ್ನು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೊಂದಿಗೆ ಭಾಗವಹಿಸಿ ಮಾತನಾಡಿ, ಪ್ರಧಾನಮಂತ್ರಿಗಳು ರಾಜ್ಯಕ್ಕೆ ಎರಡು ಕೊಡುಗೆಗಳನ್ನು ಕೊಟ್ಟಿದ್ದಾರೆ.
ಕರ್ನಾಟಕದ ಅಭಿವೃದ್ಧಿ ಪಥದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿರುವ ದಿನ
ಇಂದು ಕರ್ನಾಟಕದ ಅಭಿವೃದ್ಧಿ ಪಥದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿರುವ ದಿನವಾಗಿದೆ. ನಾಡಿಗೆ ಶ್ರೇಷ್ಟ ಸಂತರಾದ ಕನಕದಾಸರ ಜಯಂತಿ , ಮಹರ್ಷಿ ವಾಲ್ಮೀಕಿಯವರಿಗೆ ಹಾಗೂ ನಾಡಿನ ಸಂರಕ್ಷಣೆಗೆ ಜೀವತೆತ್ತ ವೀರ ವನಿತೆ ಒನಕೆ ಓಬವ್ವ ಪುಷ್ಪಾರ್ಚನೆ ಮಾಡುವ ಮೂಲಕ ನಾಡಿನ ಜನರ ಭಾವನೆಗಳಿಗೆ ಗೌರವ ಸಲ್ಲಿಸಿದ್ದಾರೆ. ಬೆಂಗಳೂರು, ಮೈಸೂರು ಚೆನ್ನೈಯನ್ನು ಸಂಪರ್ಕಿಸುವ ವಂದೇ ಭಾರತ ರೈಲಿಗೆ ಹಸಿರು ನಿಶಾನೆ ತೋರಿಸಲಾಗಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾಣ ನಿಲ್ದಾಣದ ಟರ್ಮಿನಲ್ 2 ಕ್ಕೆ ಚಾಲನೆ ನೀಡಲಾಗಿದ್ದು, ಇದು ದೇಶದ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ. ಇದಕ್ಕಾಗಿ ಸಮಸ್ತ ಕನ್ನಡ ನಾಡಿನ ಜನತೆಯ ಪರವಾಗಿ ಪ್ರಧಾನಿ ಮಮತ್ರಿ ನರೇಂದ್ರ ಮೋದಿಯವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಬೆಂಗಳೂರು ಇಂದು ಅಂತರರಾಷ್ಟ್ರೀಯ ನಗರವಾಗಿ ಬೆಳೆದಿದೆ
ನಾಡಪ್ರಭು ಕೆಂಪೇಗೌಡರು, ವಿಜಯನಗರ ಸಾಮ್ರಾಜ್ಯದ ಸುವರ್ಣ ಯುಗದ ದರ್ಶನವನ್ನು ಬೆಂಗಳೂರಿನ ಸುತ್ತಮುತ್ತಲಿನ ಗ್ರಾಮಗಳಿಗೆ ಮಾಡಿಸಿದ್ದಾರೆ. ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ಇಂದು ಅಂತರರಾಷ್ಟ್ರೀಯ ನಗರವಾಗಿ ಬೆಳೆದಿದೆ. ಯೋಜನಾಬದ್ಧ ನಗರ ನಿರ್ಮಿಸಿ, ಹಲವು ಕೆರೆಕಟ್ಟೆಗಳು, ಪೇಟೆಗಳನ್ನು ನಿರ್ಮಿಸುವ ಮೂಲಕ ಜನ ನೆಮ್ಮದಿಯ ಜೀವನ ಬದುಕುವಂತೆ ಮಾಡಿದ್ದಾರೆ. ನಾಡಪ್ರಭು. ಕೆಂಪೇಗೌಡರಿಗೆ ಗೌರವ ಸಲ್ಲಿಸುವ ಮುಖಾಂತರ ನಾಡಿನ ಸಂಸ್ಕೃತಿ, ಇತಿಹಾಸ ಪರಂಪರೆ, ಪ್ರಗತಿಪರ ಚಿಂತನೆಗೆ ಗೌರವ ಸಲ್ಲಿಸಿದಂತಾಗಿದೆ. ಗುಜರಾತಿನಲ್ಲಿ ಏಕತೆಯ ಪ್ರತಿಮೆಯಿದ್ದರೆ, ರಾಜ್ಯದ ಸರದಾರ ಕೆಂಪೇಗೌಡರ ಪ್ರಗತಿಯ ಪ್ರತಿಮೆಯನ್ನು ಉದ್ಘಾಟಿಸಲಾಗಿದೆ ಎಂದರು.