ಧರ್ಮಸ್ಥಳಕ್ಕೆ ಗಿರ್ ಕರುವಿನೊಂದಿಗೆ 360 ಕಿ.ಮೀ ಕಾಲ್ನಡಿಗೆ: ಮಂಜುನಾಥ ಮಡಿಲಿಗೆ ಮೊದಲ ಕರು ಸಮರ್ಪಣೆ

ಧರ್ಮಸ್ಥಳಕ್ಕೆ ಗಿರ್ ಕರುವಿನೊಂದಿಗೆ 360 ಕಿ.ಮೀ ಕಾಲ್ನಡಿಗೆ: ಮಂಜುನಾಥ ಮಡಿಲಿಗೆ ಮೊದಲ ಕರು ಸಮರ್ಪಣೆ

ಬೆಂಗಳೂರಿನ ; ಜಿಗಣಿಯಿಂದ ಯುವಕನೊಬ್ಬ ತನ್ನ ಕರುವಿನೊಂದಿಗೆ ಧರ್ಮಸ್ಥಳಕ್ಕೆ ಕಾಲ್ನಡಿಗೆ ಮೂಲಕ ಆಗಮಿಸಿ ಮಂಜುನಾಥನ ಸನ್ನಿಧಿಗೆ ಕರುವನ್ನು ಅರ್ಪಿಸಿದ್ದಾನೆ.

ಬೆಳ್ತಂಗಡಿ: ಸುಮಾರು 800 ವರ್ಷಗಳ ಐತಿಹ್ಯವಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ.

ದೇವಾಯಲಕ್ಕೆ ಆಗಮಿಸುವ ಅನೇಕ ಭಕ್ತರು ತಮ್ಮ ಭಕ್ತ್ಯಾನುಸಾರ ಮನೆಯಲ್ಲಿ ಬೆಳೆ, ಭತ್ತ, ತರಕಾರಿ, ಫಲ, ಪುಷ್ಪವನ್ನು ಸಮರ್ಪಿಸುವುದು ವಾಡಿಕೆ. ಆದರೆ, ಕಳಸದ ಹಿರೇಬೈಲ್‌ನ ಶ್ರೇಯಾಂಸ್ ಜೈನ್ ಎಂಬುವವರು ವಿಭಿನ್ನವಾಗಿ ತಮ್ಮ ಭಕ್ತಿಯನ್ನು ಪ್ರದರ್ಶಿಸಿದ್ದಾರೆ.

ಬೆಂಗಳೂರಿನ ಜಿಗಣಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: ಹಿರೇಬೈಲ್‌ ನ ಶ್ರೇಯಾಂಸ್ ಜೈನ್ ಎಂಬುವವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಶ್ರೇಯಾಂಸ್ ಅವರಿಗೆ ಜಾನುವಾರುಗಳೆಂದರೆ ಅಚ್ಚುಮೆಚ್ಚು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದ ಇವರು, ಸಿದ್ಧವನ ಗುರುಕುಲದಲ್ಲಿ ಶಿಕ್ಷಣ ಪಡೆಯುತ್ತಿರುವಾಗಲೇ ಆಕಳು ಪ್ರೇಮ ಚಿಗುರೊಡೆದಿತ್ತು.

ಧರ್ಮಸ್ಥಳಕ್ಕೆ ಗಿರ್ ಕರುವಿನೊಂದಿಗೆ 360 ಕಿ.ಮೀ ಕಾಲ್ನಡಿಗೆ : ಮಂಜುನಾಥ ಮಡಿಲಿಗೆ ಮೊದಲ ಕರು ಸಮರ್ಪಣೆ

ಕರುವನ್ನು ಮಂಜುನಾಥನ ಸನ್ನಿಧಿಗೆ ಅರ್ಪಿಸುವ ಸಂಕಲ್ಪ: ಇನ್ನು ಬೆಂಗಳೂರಿನ ಜಿಗಣಿಯಲ್ಲಿದ್ದಾಗ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವಾಗ ಹೈನುಗಾರಿಕೆಯತ್ತ ಆಸಕ್ತಿ ಮೂಡುತ್ತದೆ. ಅದೇ ರೀತಿ ತಮ್ಮ ಬಾಡಿಗೆ ಮನೆಯ ಬಳಿ ಇದ್ದ ಖಾಲಿ ಜಾಗದಲ್ಲಿ ಗಿರ್ ತಳಿಯ ಹಸುವನ್ನು ಸಾಕಲು ಪ್ರಾರಂಭಿಸುತ್ತಾರೆ. ಜೊತೆಗೆ ಇದರ ಮೊದಲ ಕರುವನ್ನು ಧರ್ಮಸ್ಥಳ ಮಂಜುನಾಥ ಸನ್ನಿಧಿಗೆ ಅರ್ಪಿಸುವ ಬಗ್ಗೆ ಸಂಕಲ್ಪ ಮಾಡುತ್ತಾರೆ.

36 ದಿನಗಳಲ್ಲಿ 360 ಕಿಮೀ ಪಾದಯಾತ್ರೆ : ಅದರಂತೆಯೇ ಭೀಷ್ಮ ಹೆಸರಿನ ಈ ಕರುವಿನೊಂದಿಗೆ ಜಿಗಣಿಯಿಂದ 36 ದಿನಗಳಲ್ಲಿ 360 ಕಿ.ಮೀ ಕ್ರಮಿಸಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲದೇ ನಡೆದಾಡುವ ದೇವರೆಂದೇ ಖ್ಯಾತರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ತಮ್ಮ ಪ್ರೀತಿಯ ಕರುವನ್ನು ಅರ್ಪಿಸಿದ್ದಾರೆ. ಕಾಲ್ನಡಿಗೆಯ ಜೊತೆಗೆ ಶ್ರೇಯಾಂಸ್ ತಮ್ಮ ಆಫೀಸಿನ ಕೆಲಸವನ್ನು ಮಾಡಿದ್ದಾರೆ. ಸುಮಾರು 360 ಕಿ.ಮೀ ಕ್ರಮಿಸಲು ಅವರು 1,000 ರೂನಷ್ಟು ವೆಚ್ಚ ಮಾಡಿದ್ದಾರೆ. ಕಾಲ್ನಡಿಗೆಯ ಸಂದರ್ಭ ಪ್ರತಿ ಊರಿನಲ್ಲೂ ಎತ್ತಿನ ಆರೋಗ್ಯ ತಪಾಸಣೆ ಮಾಡಿಕೊಂಡು ಬಂದಿದ್ದಾರೆ.

ಹೆಗ್ಗಡೆಯವರಿಂದ ಭೀಷ್ಮನಿಗೆ ಫಲ ಅರ್ಪಣೆ : ಗಿರ್ ಎತ್ತಿನೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಶ್ರೇಯಾಂಸ್ ಅವರ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಆಶೀರ್ವದಿಸಿದರು. ಭೀಷ್ಮನೊಂದಿಗಿನ ಒಡನಾಟ ನೆನೆದು ಶ್ರೇಯಾಂಸ್ ಆನಂದ ಭಾಷ್ಪ ಸುರಿಸಿದರು.