ದುರ್ಗದಿಂದ ಚೀನಗೆ ಅದಿರು ರಫ್ತು ಆರಂಭ

ಪಣಜಿ: ದಶಕಗಳ ಬಳಿಕ ಗೋವಾದ ಮಡಂಗಾವ್ ಬಂದರಿನಿಂದ ಕರ್ನಾಟಕದ ಅದಿರನ್ನು ಚೀನಗೆ ರಫ್ತು ಮಾಡಲಾಗುತ್ತಿದೆ. ಚಿತ್ರದುರ್ಗದಲ್ಲಿ ತೆಗೆದ 4,000 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಕಾರ್ಗೋದಲ್ಲಿ ಚೀನಗೆ ಕಳುಹಿಸಲಾಗುವುದು ಎಂದು ವೇದಾಂತ ಕಂಪೆನಿ ಹೇಳಿದೆ.
ದಶಕದ ಹಿಂದೆ ಕರ್ನಾಟಕದಲ್ಲಿ ಭಾರೀ ಸುದ್ದಿಯಲ್ಲಿದ್ದ ಅಕ್ರಮ ಗಣಿಗಾರಿಕೆಯಿಂದಾಗಿ ಚೀನಗೆ ರಫ್ತು ಮಾಡುವುದು ಸ್ಥಗಿತವಾಗಿತ್ತು. ಅಷ್ಟೇ ಅಲ್ಲ ಇಡೀ ಗಣಗಾರಿಕೆ ವಹಿವಾಟು ಸಂಪೂರ್ಣವಾಗಿ ನಿಂತುಹೋಗಿತ್ತು.
ಈಗ ವೇದಾಂತ ಕಂಪೆನಿಗೆ ಸೇರಿದ 4000 ಮೆಟ್ರಿಕ್ ಟನ್ ಅದಿರನ್ನು ಈಗಾಗಲೇ ಮಡಂಗಾವ್ ಬಂದರಿಗೆ ತರಲಾಗಿದೆ. ಸದ್ಯದಲ್ಲೇ ಚೀನಗೆ ಕಳುಹಿಸಲಾಗುತ್ತದೆ ಎಂದು ವೇದಾಂತ ಕಂಪೆನಿಯ ಕಬ್ಬಿಣದ ಅದಿರು ವ್ಯಾಪಾರ(ಲಾಜಿಸ್ಟಿಕ್ಸ್)ದ ಮುಖ್ಯಸ್ಥ ನಿತೇಶ್ ಸಮಂತ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಗೋವಾ ಸರಕಾರವು, ಬೇರೆ ರಾಜ್ಯಗಳ ಅದಿರನ್ನು ತಮ್ಮ ಬಂದರುಗಳ ಮೂಲಕ ರಫ್ತು ಮಾಡುವುದಕ್ಕೆ ಒಪ್ಪಿಗೆ ನೀಡಿದೆ. ಹೀಗಾಗಿ ಚಿತ್ರದುರ್ಗದಿಂದ ಅದಿರನ್ನು ತರಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚೇಚ್ಚು ಅದಿರನ್ನು ಕಳುಹಿಸಲಾಗುತ್ತದೆ. ಆಗ ಸ್ಥಳೀಯ ಆರ್ಥಿಕತೆಗೂ ಅನುಕೂಲವಾಗುತ್ತದೆ ಎಂದು ಸಮಂತ್ ಅಭಿಪ್ರಾಯಪಟ್ಟಿದ್ದಾರೆ.