ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ

ಮೈಸೂರು: ಕನ್ನಡ ಚಿತ್ರರಂಗದಲ್ಲಿ ಪ್ರೇಮಕಥೆಗಳಿಗೇನೂ ಬರವಿಲ್ಲ. ಈಗಾಗಲೇ ಹಲವು ನಟ-ನಟಿಯರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಈಗ ಆ ಸಾಲಿಗೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸಹ ಸೇರಿದ್ದಾರೆ. ವಸಿಷ್ಠ ಮತ್ತು ಹರಿಪ್ರಿಯಾ ಅವರ ಮದುವೆ ಇಂದು ಬೆಳಿಗ್ಗೆ ಇಲ್ಲಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮುಗಿದಿದೆ.

ವಸಿಷ್ಠ ಮತ್ತು ಹರಿಪ್ರಿಯಾ ಪ್ರೀತಿಸುತ್ತಿದ್ದಾರೆ, ಸದ್ಯದಲ್ಲೇ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಕಳೆದ ವರ್ಷದ ಕೊನೆಯಲ್ಲಿ ಕೇಳಿಬಂದಿತ್ತು. ಅದಕ್ಕೆ ಸರಿಯಾಗಿ, ನಿಶ್ಚಿತಾರ್ಥ ಮಾಡಿಕೊಂಡು, ಸದ್ಯದಲ್ಲೇ ಮದುವೆಯಾಗುವುದಾಗಿ ಅಧಿಕೃತವಾಗಿ ಘೋಷಿಸಿದ್ದರು.

ಅದರಂತೆ ಇಂದು ಸ್ಮಾರ್ಥ ಸಂಪ್ರದಾಯದಂತೆ ಮದುವೆ ನಡೆದಿದೆ. ಬೆಳಿಗ್ಗೆ 8 ಗಂಟೆಯಿಂದ ಮದುವೆ ಶಾಸ್ತ್ರಗಳು ಶುರುವಾಗಿದ್ದು, 9.50 ರಿಂದ 10 .45 ರವರೆಗಿನ ಮೀನ ಲಗ್ನದಲ್ಲಿ ಮದುವೆ ನಡೆದಿದೆ.

ಈ ಮದುವೆಯು ಕುಟುಂಬಸ್ಥರು ಮತ್ತು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ನಡೆದಿದೆ. ಚಿತ್ರರಂಗದಿಂದ ಶಿವರಾಜಕುಮಾರ್​ ಮತ್ತು ಡಾಲಿ ಧನಂಜಯ್ ಈ ಮದುವೆಯಲ್ಲಿ ಭಾಗವಹಿಸಿ ವಸಿಷ್ಠ ಮತ್ತು ಹರಿಪ್ರಿಯಾ ಅವರಿಗೆ ಶುಭ ಕೋರಿದ್ದಾರೆ.