ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದ ಕೇಂದ್ರ ಸಚಿವರ ಸಹೋದರ; ಐಸಿಯುನಲ್ಲಿ ವೈದ್ಯರಿಲ್ಲದೇ ಸಾವು

ಪಾಟ್ನಾ : ಕೇಂದ್ರ ಸಚಿವೆ ಅಶ್ವಿನಿ ಚೌಬೆ(Union Minister Ashwini Choubey) ಅವರ ಸಹೋದರ ನಿರ್ಮಲ್ ಚೌಬೆ ಶುಕ್ರವಾರ ಭಾಗಲ್ಪುರದ ಮಾಯಾಗಂಜ್ ಆಸ್ಪತ್ರೆಯಲ್ಲಿ ನಿಧನರಾದರು.
ನಿರ್ಮಲ್ ಚೌಬೆ ಭಾಗಲ್ಪುರ ನಗರದ ಆದಂಪುರ ನಿವಾಸಿ.
ತೀವ್ರ ಹೃದಯಾಘಾತಕ್ಕೊಳಗಾದ ನಿರ್ಮಲ್ ಗಂಭೀರ ಸ್ಥಿತಿಯಲ್ಲಿದ್ದರು. ನಿರ್ಮಲ್ ಅವರನ್ನು ಐಸಿಯುಗೆ ದಾಖಲಿಸಿದಾಗ ಅಲ್ಲಿ ಒಬ್ಬ ವೈದ್ಯರೂ ಇರಲಿಲ್ಲ. ಇದರಿಂದ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಅವರು ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಈ ವೇಳೆ ಸಂಬಂಧಿಕರು ಗಲಾಟೆ ಮಾಡಲು ಶುರು ಮಡಿದಾಗ ಮಾಹಿತಿ ಮೇರೆಗೆ ಆಗಮಿಸಿದ ಡಿಎಸ್ಪಿ (ನಗರ) ಅಜಯ್ ಕುಮಾರ್ ಚೌಧರಿ ಸಂಬಂಧಿಕರನ್ನು ಸಮಾಧಾನಪಡಿಸಿದ್ದು, ಇಬ್ಬರು ವೈದ್ಯರನ್ನು ಅಮಾನತುಗೊಳಿಸಿದ್ದಾರೆ.
'ರೋಗಿಯನ್ನು ಗಂಭೀರ ಸ್ಥಿತಿಯಲ್ಲಿ ಕರೆತರಲಾಯಿತು. ಅವರಿಗೆ ತೀವ್ರ ಹೃದಯಾಘಾತವಾಗಿದೆ ಎಂದು ಕಂಡುಬಂದಿದ್ದು, ಹಿರಿಯ ವೈದ್ಯರು ಅವರಿಗೆ ಅಗತ್ಯ ಔಷಧವನ್ನು ನೀಡಿದರು. ನಂತರ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ಆದರೆ, ಅಲ್ಲಿ ವೈದ್ಯರಿರಲಿಲ್ಲ. ಈ ಸಂಬಂಧ ನಾನು 2 ವೈದ್ಯರನ್ನು ಅಮಾನತುಗೊಳಿಸಿದ್ದೇನೆ' ಎಂದು ಡಾ. ಕೆಆರ್ ದಾಸ್, ಆಸ್ಪತ್ರೆ ಅಧೀಕ್ಷಕರು ತಿಳಿಸಿದ್ದಾರೆ.