ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಅಳವಡಿಸಿದ್ದ ಐಇಡಿ ಸ್ಫೋಟಗೊಂಡು ಭದ್ರತಾ ಸಿಬ್ಬಂದಿ ಸಾವು

ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಅಳವಡಿಸಿದ್ದ ಐಇಡಿ ಸ್ಫೋಟಗೊಂಡು ಭದ್ರತಾ ಸಿಬ್ಬಂದಿ ಸಾವು

ನಾರಾಯಣಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲೀಯರು ಅಳವಡಿಸಿದ್ದ ಒತ್ತಡದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡ ಪರಿಣಾಮ ಛತ್ತೀಸ್‌ಗಢ ಸಶಸ್ತ್ರ ಪಡೆ (ಸಿಎಎಫ್) ಹೆಡ್ ಕಾನ್‌ಸ್ಟೆಬಲ್ ಇಂದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಓರ್ಚಾ ಪೊಲೀಸ್ ಠಾಣಾ ವ್ಯಾಪ್ತಿಯ ಬಟಮ್ ಗ್ರಾಮದ ಬಳಿ ಇಂದು ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ ಎಂದು ನಾರಾಯಣಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಸಾಗರ್ ಸಿದರ್ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ನಕ್ಸಲೀಯರು ಬ್ಯಾನರ್‌ಗಳನ್ನು ಹಾಕಿದ್ದಾರೆ ಎಂಬ ಮಾಹಿತಿ ಪಡೆದ ನಂತರ, ಸಿಎಎಫ್ ತಂಡವು ರಾಯ್‌ಪುರದಿಂದ ಸುಮಾರು 300 ಕಿಮೀ ದೂರದಲ್ಲಿರುವ ಓರ್ಚಾ ಪೊಲೀಸ್ ಠಾಣೆಯಿಂದ ಗಸ್ತು ತಿರುಗುತ್ತಿತ್ತು. ಈ ವೇಳೆ, ಸಿಎಎಫ್‌ನ 16 ನೇ ಬೆಟಾಲಿಯನ್‌ಗೆ ಸೇರಿದ ಹೆಡ್ ಕಾನ್‌ಸ್ಟೆಬಲ್ ಸಂಜಯ್ ಲಾಕ್ರಾ ಅವರು ಅಜಾಗರೂಕತೆಯಿಂದ IED ಮೇಲೆ ಹೆಜ್ಜೆ ಇಟ್ಟಾಗ ಅದು ಸ್ಫೋಟಗೊಂಡ ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯ ನಿವಾಸಿಯಾದ ಲಾಕ್ರಾ ಅವರ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಶನಿವಾರ, ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲೀಯರೊಂದಿಗಿನ ಎನ್‌ಕೌಂಟರ್‌ನಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಹತರಾಗಿದ್ದರು.