'ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಲ್ಲ' : ಸಚಿವ ಸುಧಾಕರ್ ಅಚ್ಚರಿ ಹೇಳಿಕೆ

ಬೆಂಗಳೂರು : ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲ್ಲ ಎಂದು ಸಚಿವ ಡಾ.ಕೆ ಸುಧಾಕರ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ಲುವುದು ಬಹಳ ಕಷ್ಟ, ಕೋಲಾರದಲ್ಲಿ ಕೆಲವು ನಾಯಕರು ಸೋತಿದ್ದಾರೆ, ಅದಕ್ಕೆ ಸಿದ್ದರಾಮಯ್ಯರನ್ನು ಇಟ್ಟುಕೊಂಡು ಗೆಲ್ಲಬೇಕು ಎಂದು ಪ್ರಯತ್ನಿಸುತ್ತಿದ್ದಾರೆ ಎಂದರು.
ಬೌಲಿಂಗ್ ಕೋಲಾರದ ಕಡೆ ಹಾಕಿ ರನ್ನಿಂಗ್ ವರುಣ ಕಡೆ ಓಡ್ತಾರೆ. ಕೊನೆಗೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವುದಿಲ್ಲ, ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲ್ಲ ಇದು ಖಚಿತ ಎಂದು ಸಚಿವ ಡಾ.ಕೆ ಸುಧಾಕರ್ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ರಾಜಕೀಯಕ್ಕಾಗಿ ಮಾತನಾಡಬಹುದು. ಆದರೆ ನಾನು ಏಕೆ ಕಾಂಗ್ರೆಸ್ ತೊರೆದೆ ಎನ್ನುವುದು ಅವರಿಗೂ ಗೊತ್ತಿದೆ. ಹಣಕ್ಕಾಗಿ ಹೋಗದೆ ಸಿದ್ಧಾಂತಕ್ಕಾಗಿ ಬಿಜೆಪಿಯನ್ನು ಸೇರಿದೆ ಹಾಗೂ ಅನೈತಿಕವಾಗಿ ಜನತಾದಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಬೇಸತ್ತಿದ್ದೆ ಎಂಬುದು ಅವರಿಗೆ ತಿಳಿದಿದೆ ಎಂದರು.ಸಿದ್ದರಾಮಯ್ಯನವರು ಜೀವನವಿಡೀ ಕಾಂಗ್ರೆಸ್ ನಾಯಕರನ್ನು ಬೈದುಕೊಂಡೇ ಇದ್ದರು. ಜನತಾದಳದಲ್ಲೇ ಇದ್ದು ಸಚಿವರಾಗಿ, ಡಿಸಿಎಂ ಆಗಿ, ಬಳಿಕ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಸೇರಿದರು. ಒಂದು ವರ್ಷ ತಡೆದುಕೋ, ಲೋಕಸಭೆ ಚುನಾವಣೆ ಬಳಿಕ ಕುಮಾರಸ್ವಾಮಿಯವರನ್ನು ಸಿಎಂ ಆಗಿ ಒಂದು ದಿನವೂ ಇರಿಸುವುದಿಲ್ಲ ಎಂದು ನಮಗೆಲ್ಲರಿಗೂ ಸಿದ್ದರಾಮಯ್ಯನವರು ಹೇಳಿದ್ದರು. ಆ ಬಳಿಕ 5 ವರ್ಷವೂ ಸಿಎಂ ಎಂದುಬಿಟ್ಟರು. ಆ ಸಮಯದಲ್ಲಿ ಹೆಚ್ಚು ಸಮಸ್ಯೆ ಇತ್ತು. ನನ್ನ ರಾಜಕೀಯ ಭವಿಷ್ಯವೇ ಮುಗಿಯುತ್ತಿತ್ತು. ಆದರೂ ಮತ್ತೆ ಸ್ಪರ್ಧಿಸಿ ಜನರ ಆಶೀರ್ವಾದ ಪಡೆದೆ ಎಂದರು.