ಒಣಮೀನು ಪ್ರೀಯರೇ ಎಚ್ಚರ: ಸಂಪ್ರದಾಯಿಕ ಪದ್ಧತಿಯಿಂದ ಹಾಳಾಗಲಿದೆ ಆರೋಗ್ಯ

ಒಣಮೀನು ಪ್ರೀಯರೇ ಎಚ್ಚರ: ಸಂಪ್ರದಾಯಿಕ ಪದ್ಧತಿಯಿಂದ ಹಾಳಾಗಲಿದೆ ಆರೋಗ್ಯ

ಮಂಗಳೂರು, ಫೆಬ್ರವರಿ 4: ಒಣಮೀನು ತಿನ್ನುವ ಮೀನು ಪ್ರೀಯರೇ, ನೀವು ಎಚ್ಚರವಾಗಿರಬೇಕು. ಒಣಮೀನಿನ ಖಾದ್ಯ ಮೆಲ್ಲುವ ಮುನ್ನ ಅದರ ಸಂಸ್ಕರಣೆಯನ್ನು ನೀವು ನೋಡಲೇ ಬೇಕು. ನೀವು ತಿನ್ನುವ ಒಣಮೀನು ನಿಮ್ಮ ಕೈಗೆ ಬರುವ ಮುನ್ನ ಅತೀ ಕೊಳಕು ರೀತಿ ಸಂಸ್ಕರಣೆಯಾಗುತ್ತಿದೆ.

ಒಣ ಮೀನನ್ನು ನೀವು ತಿನ್ನುವ ಮೊದಲು ಕಾಗೆ ನಾಯಿಗಳು ರುಚಿ ನೋಡಿರುತ್ತದೆ.

ದಡಕ್ಕೆ ಅಪ್ಪಳಿಸುತ್ತಿರುವ ತ್ಯಾಜ್ಯದ ನೀರು, ನದಿ ದಡದಲ್ಲೇ ವಿಶಾಲವಾಗಿ ಹರಡಿಕೊಂಡಿರುವ ಒಣ ಮೀನು, ಒಣಮೀನಿನ ರುಚಿ ನೋಡಲು ಕಾದು ಕುಳಿತ ನಾಯಿಗಳು ಮಂಗಳೂರಿನ ದ್ವೀಪ ಪ್ರದೇಶವಾದ ಬೆಂಗರೆಯಲ್ಲಿ ಈ ದೃಶ್ಯ ಕಂಡುಬರುತ್ತದೆ. ಅತೀ ಹೆಚ್ಚು ಮೀನುಗಾರ ಕುಟುಂಬಗಳನ್ನೇ ಹೊಂದಿರುವ ಬೆಂಗರೆಯಲ್ಲಿ ಮೀನುಗಾರರು ಹಸಿ ಮೀನು ಜೊತೆಗೆ ಒಣಮೀನನ್ನೂ ಮಾರಾಟ ಮಾಡುತ್ತಾರೆ.

ಹಸಿಮೀನನ್ನು ಸಾಂಪ್ರದಾಯಿಕ ಮಾದರಿಯಲ್ಲಿ ಒಣ ಮೀನನ್ನಾಗಿ ಮಾಡಿ ಮಾರಾಟ ಮಾಡಲಾಗುತ್ತದೆ. ಆದರೆ ಈ ಸಂಪ್ರಾದಾಯಿಕ ಮಾದರಿ ಈಗ ಜನರ ಬಾಳಿಗೆ ಮುಳುವಾಗುವ ಸಾಧ್ಯತೆಗಳಿವೆ. ತ್ಯಾಜ್ಯದ ಬಳಿಯೇ ಮೀನನ್ನು ಒಣಗಲು ಹಾಕಲಾಗುತ್ತಿದ್ದು, ಒಣಮೀನಿಗೆ ಯಾವುದೇ ಪ್ರಾಣಿ ಪಕ್ಷಿಗಳು ಬರದಂತೆ ಸುರಕ್ಷತಾ ಕ್ರಮಗಳನ್ನು ವಹಿಸಲಾಗುತ್ತಿಲ್ಲ. ನಾಯಿಗಳು ಆಹಾರ ಮೇಲೆಯೇ ಮಲಗುತ್ತದೆ. ಮಲಮೂತ್ರ ವಿಸರ್ಜನೆಯನ್ನು ಮಾಡುತ್ತದೆ ಎಂಬ ದೂರು ಕೇಳಿ ಬಂದಿದೆ..

ರಾಜ್ಯದ ಬೇರೆ ಬೇರೆ ಜಿಲ್ಲೆ,ಕೇರಳದ ಹಲವು ಜಿಲ್ಲೆಗಳಿಗೆ ಮಂಗಳೂರಿನಿಂದಲೇ ಒಣಮೀನು ಪ್ಯಾಕ್ ಆಗಿ ಮಾರಾಟವಾಗುತ್ತದೆ. ಮಂಗಳೂರಿನ ಬಹುತೇಕ ಮೀನುಗಾರ ಕುಟುಂಬಗಳ ಒಣಮೀನು ಉದ್ಯಮವನ್ನು ಮಾಡುತ್ತಿದೆ. ಹಸಿಮೀನನ್ನು ಉಪ್ಪಿನಲ್ಲಿ ಶೇಖರಿಸಿ ಕೊಳೆಸಿ ಒಣಮೀನು ಮಾಡಲಾಗುತ್ತಿದ್ದು, ಮೀನು ಶುಚಿಗೊಳಿಸಲು ಬಳಸುವ ನೀರೂ ತ್ಯಾಜಯುಕ್ತವಾಗಿದೆ. ಹೀಗಾಗಿ ಒಣ ಮೀನು ಸರಿಯಾಗಿ ಸಂಸ್ಕರಣೆಯಾಗುತ್ತಿಲ್ಲ ಎಂಬುವುದು ಒಣಮೀನು ಆಹಾರ ಪ್ರೀಯರ ದೂರಾಗಿದೆ.

ಈ ರೀತಿಯ ಸಂಪ್ರದಾಯಿಕ ಪದ್ಧತಿಯಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಮೀನುಗಾರರಿಗೆ ಈ ಬಗ್ಗೆ ತಿಳುವಳಿಕೆ ನೀಡಲು ಆಹಾರ ಇಲಾಖೆ ಸೂಚಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದ.ಕ ಜಿಲ್ಲಾ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿ ಡಾ.ಪ್ರವೀಣ್, "ಮೀನುಗಾರರು ಹಳೆಯ ಪದ್ಧತಿಯನ್ನು ಮುಂದುವರಿಸಿದ್ದಾರೆ. ಆಹಾರದ ಗುಣಮಟ್ಟತೆ ಕಾಪಾಡಿಕೊಳ್ಳಲಾಗುತ್ತಿಲ್ಲ ಎಂಬ ದೂರುಗಳೂ ಬಂದಿದೆ. ಈ ಬಗ್ಗೆ ಅಧಿಕಾರಿಗಳ ತಂಡ ತಪಾಸಣೆ ಮಾಡಲಿದೆ. ಮೀನುಗಾರರಿಗೆ ಒಣ ಮೀನು ಮಾಡಲು ಈಗಾಗಲೇ ಸರ್ಕಾರದ ಸಬ್ಸಿಡಿ ಹೊಂದಿದ ಯಂತ್ರಗಳು ಲಭ್ಯವಿದೆ. ಆದರೆ ಹಣ ಖರ್ಚಾಗುತ್ತದೆ ಎಂದು ಮೀನುಗಾರರು ಯಂತ್ರ ಖರೀದಿಗೆ ಮುಂದಾಗುತ್ತಿಲ್ಲ. ಈ ಬಗ್ಗೆ ಮೀನುಗಾರರಿಗೆ ಸೂಕ್ತ ಮಾಹಿತಿಯನ್ನು ನೀಡುತ್ತೇವೆ" ಎಂದು ಹೇಳಿದ್ದಾರೆ.

ಸದ್ಯ ಮೀನು ಪ್ರೀಯರು ಒಣ ಮೀನು ತಿನ್ನುವ ಮುನ್ನ ಯೋಚಿಸಬೇಕಾದ ಅನಿವಾರ್ಯತೆ ಸದ್ಯಕ್ಕಿದೆ. ಆಹಾರ ಇಲಾಖೆ ಈ ಕೂಡಲೇ ಮೀನುಗಾರರ ಸಂಪ್ರದಾಯಿಕ ಪದ್ಧತಿಗೆ ಬ್ರೇಕ್ ಹಾಕಿ, ನೂತನ ಪದ್ಧತಿಯನ್ನು ಆರಂಭಿಸಬೇಕಿದೆ. ಇಲ್ಲವಾದಲ್ಲಿ ಒಣಮೀನು ಜನರಿಗೆ ವಿಷವಾಗೋದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವುದು ಹಲವರ ಅಭಿಪ್ರಾಯವಾಗಿದೆ.