ಇಂದು ರಾಜ್ಯ ರಾಜಧಾನಿಯಲ್ಲಿ ಆಟೋ ಸಂಚಾರ ಬಂದ್; ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಆಟೋ ಚಾಲಕರು!

ಬೆಂಗಳೂರು: ಇಂದು ಒಂದು ದಿನ ಸಂಪೂರ್ಣ ಆಟೋ ಸಂಚಾರ ಬಂದ್ ಮಾಡಲು ನಿರ್ಧಾರ ಆಟೋ ಚಾಲಕರ ಸಂಘ ನಿರ್ಧರಿಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಇಂದು ಆಟೋಗಳು ಲಭ್ಯವಿರುವುದಿಲ್ಲ.
ನಿನ್ನೆ ಮಧ್ಯರಾತ್ರಿ 12 ರಿಂದ ಇಂದು ರಾತ್ರಿ ಹನ್ನೆರಡು ಗಂಟೆಯವರೆಗೆ ಸಂಚಾರ ಬಂದ್ ಮಾಡಲು ಆಟೋ ಚಾಲಕರು ನಿರ್ಧರಿಸಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರಕ್ಕೆ ಮೂರು ದಿನಗಳ ಒಳಗಾಗಿ ರ್ಯಾಪಿಡೋ ಮುಂತಾದ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬಂದ್ ಮಾಡುವಂತೆ ಡೆಡ್ಲೈನ್ ಹಾಕಿದ್ದರು. ನಿನ್ನೆಗೆ ಸಾರಥಿಗಳು ನೀಡಿದ್ದ ಗಡುವ ಮುಗಿದಿದ್ದು ಇಂದು ಮುಷ್ಕರ ಶುರುಮಾಡಿದ್ದಾರೆ.
ಈ ಹಿಂದೆ ಮೂರು ದಿನಗಳ ಕಾಲ ಆಟೋ ಚಾಲಕರು ಕಪ್ಪು ಪಟ್ಟಿ ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಆಟೋ ಚಾಲಕರು ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಮುಷ್ಕರ ಮಾಡುತ್ತಿದ್ದಾರೆ.
ರ್ಯಾಪಿಡೋ ಬೈಕ್ ಟ್ಯಾಕ್ಸಿ ರಾಜ್ಯದಲ್ಲಿ ಬ್ಯಾನ್ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನ ಒಟ್ಟು 21ಆಟೋ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ನಿರ್ಧಾರ ಮಾಡಿದ್ದು ಇಂದು 2 ಲಕ್ಷದ 10 ಸಾವಿರ ಆಟೋಗಳ ಸಂಚಾರ ಬಂದ್ ಆಗುತ್ತೆ ಎಂದು ಮುಖಂಡರು ಹೇಳುತ್ತಿದ್ದಾರೆ.
ಈ ನಡುವೆ ಒಂದಷ್ಟು ಆಟೋ ಚಾಲಕರು ಈ ಬಂದ್ಅನ್ನೇ ಬಂಡವಾಳ ಮಾಡಿಕೊಂಡಿದ್ದು ಪ್ರಯಾಣಿಕರಿಂದ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇರಿಸುತ್ತಿದ್ದಾರೆ. ಕೆಲವರಂತೂ ಬಾಯ್ಬಿಟ್ಟು 'ಸ್ಟ್ರೈಕ್ ನಡೀತಾ ಇದೆ, ಎಷ್ಟು ಕೊಡ್ತೀರಾ?' ಎಂದು ನೇರವಾಗಿಯೇ ಕೇಳುತ್ತಿದ್ದಾರೆ! ಕೆಲ ಆಟೋದವರಂತೂ ದುಪ್ಪಟ್ಟು ದರ ಡಿಮಾಂಡ್ ಮಾಡುತ್ತಿದ್ದಾರೆ. ಹೀಗಾಗಿ ಜನರು ಪ್ರೀ ಪೇಯ್ಡ್ ಆಟೋಗಳಿಗಾಗಿ ಕ್ಯೂ ಕಟ್ಟಿ ನಿಂತಿದ್ದಾರೆ. ಆದರೆ ಆಟೋಗಳ ಸಂಖ್ಯೆ ಕಮ್ಮಿ ಇದ್ದು ಇದರಿಂದಾಗಿ ಪ್ರೀ ಪೇಯ್ಡ್ ಆಟೋಗಳೂ ಸರಿಯಾಗಿ ಸಿಗದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.