ಆರ್‌ಸಿಬಿಗೆ ಮತ್ತೊಂದು ಆಘಾತ: ಮೊದಲಾರ್ಧದ ಪಂದ್ಯಗಳಲ್ಲಿ ಪ್ರಮುಖ ಬ್ಯಾಟರ್ ಆಡೋದು ಅನುಮಾನ

ಇಂಡಿಯನ್ ಪ್ರೀಮಿರ್ ಲೀಗ್ 2023ರ ಆರಂಭಕ್ಕೆ ಮುನ್ನವೇ ಆರ್‌ಸಿಬಿ ತಂಡಕ್ಕೆ ಆಟಗಾರರ ಗಾಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಗಾಯದ ಕಾರಣದಿಂದಾಗಿ ಈಗಾಗಲೇ ವಿಲ್ ಜ್ಯಾಕ್ಸ್ ಐಪಿಎಲ್‌ನಿಂದ ಹೊರಗುಳಿದಿದ್ದರು, ಅವರ ಬದಲಾಗಿ ಮೈಕೆಲ್ ಬ್ರೇಸ್‌ವೆಲ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಕೂಡ ಗಾಯದಿಂದ ಬಳಲುತ್ತಿದ್ದು ಯಾವಾಗ ಫಿಟ್ ಆಗುತ್ತಾರೆ ಎಂದು ಹೇಳುವುದು ಕಷ್ಟವಾಗಿದೆ. ಇದರ ಬೆನ್ನಲ್ಲೇ ತಂಡದ ಪ್ರಮುಖ ಬ್ಯಾಟರ್ ರಜತ್ ಪಟಿದಾರ್ ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದಾರೆ.
ಐಪಿಎಲ್‌ನ ಮೊದಲಾರ್ಧದ ಪಂದ್ಯಗಳಲ್ಲಿ ಅವರು ಆಡುವುದು ಅನುಮಾನ ಎನ್ನಲಾಗಿದೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿರುವ ಪ್ರಕಾರ, ರಜತ್ ಪಾಟಿದಾರ್ ಆರ್ ಸಿಬಿ ತಂಡವನ್ನು ಸೇರಿಕೊಳ್ಳುವ ಮೊದಲು ಗಾಯಕ್ಕೆ ತುತ್ತಾಗಿದ್ದು, ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ನಲ್ಲಿ ಪುನರ್ವಸತಿಗೆ ಒಳಗಾಗುತ್ತಿದ್ದಾರೆ.
ಗಾಯಗೊಂಡ ಬಳಿಕ ರಜತ್ ಪಾಟಿದಾರ್ ಗೆ ಮೂರು ವಾರಗಳ ವಿಶ್ರಾಂತಿ ಪಡೆಯಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಮೂರು ವಾರಗಳ ವಿಶ್ರಾಂತಿ ಬಳಿಕ ಎಂಆರ್ ಐ ಸ್ಕ್ಯಾನ್ ನಡೆಸಿದ ನಂತರವಷ್ಟೇ ಅವರು ಮತ್ತೆ ಆಡುವ ಬಗ್ಗೆ ಸ್ಪಷ್ಟವಾದ ನಿರ್ಧಾರ ತೆಗೆದಯಕೊಳ್ಳುವ ಸಾಧ್ಯತೆ ಇದೆ. ಐಪಿಎಲ್ ದ್ವಿತೀಯಾರ್ಧದಲ್ಲಿ ಆರ್‌ಸಿಬಿ ತಂಡಕ್ಕಾಗಿ ಆಡಲು ಎನ್‌ಸಿಎಯಿಂದ ಅನುಮತಿಯ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ತಂಡಕ್ಕೆ ಹೆಚ್ಚಾಯ್ತು ಆಟಗಾರರ ಗಾಯದ ಸಮಸ್ಯೆ
2022ರ ಆವೃತ್ತಿಯಲ್ಲಿ ವಿಕೆಟ್‌ಕೀಪರ್ ಲುವ್ನಿತ್ ಸಿಸೋಡಿಯಾ ಗಾಯಗೊಂಡ ಬಳಿಕ ತಂಡದಲ್ಲಿ ಸ್ಥಾನ ಪಡೆದ ರಜತ್ ಪಾಟಿದಾರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಏಳು ಪಂದ್ಯಗಳಲ್ಲಿ 152.75 ಸ್ಟ್ರೈಕ್ ರೇಟ್‌ನಲ್ಲಿ 333 ರನ್ ಗಳಿಸಿದರು. ಲಕ್ನೋ ಸೂಪರ್ ಜೈಂಟ್ಸ್ ಈಡನ್ ಗಾರ್ಡನ್ ಅಂಗಳದಲ್ಲಿ ಶತಕ ಸಿಡಿಸುವ ಮೂಲಕ ಆರ್ ಸಿಬಿ ತಂಡದ ಗೆಲುವಿಗೆ ಕಾರಣವಾಗಿದ್ದರು.
ಐಪಿಎಲ್ ಆರಂಭಕ್ಕೆ ವಾರಕ್ಕಿಂತಲೂ ಕಡಿಮೆ ಸಮಯ ಇರಬೇಕಾದರೆ ಆರ್ ಸಿಬಿ ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆಗೆ ಒಳಗಾಗಿರುವುದು ತಂಡವನ್ನು ಚಿಂತೆಗೀಡು ಮಾಡಿದೆ. ತಂಡದ ಸ್ಫೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ತಾವಿನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದು ಹೇಳಿದ್ದರು.
ಜೋಶ್ ಹೇಜಲ್‌ವುಡ್ ಕೂಡ ಗಾಯಕ್ಕೆ ತುತ್ತಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಆಡುತ್ತಿರುವ ಪ್ರಮುಖ ಬೌಲರ್ ವನಿಂದು ಹಸರಂಗ ಕೂಡ ಏಪ್ರಿಲ್ 8 ನಂತರವಷ್ಟೇ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈಗ ರಜತ್ ಪಾಟಿದಾರ್ ಅನುಪಸ್ಥಿತಿ ತಂಡದ ಚಿಂತೆಗೆ ಕಾರಣವಾಗಿದೆ.
ಅಭ್ಯಾಸ ಆರಂಭಿಸಿರುವ ಆಟಗಾರರು
ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಅನುಭವಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಸೇರಿದಂತೆ ತಂಡದ ಬಹುಪಾಲು ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಅಭ್ಯಾಸವನ್ನು ಆರಂಭಿಸಿದ್ದಾರೆ. ವಿರಾಟ್ ಕೊಹ್ಲಿ ಕೂಡ ಶನಿವಾರ ತಂಡವನ್ನು ಸೇರಿಕೊಂಡಿದ್ದಾರೆ.
ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದೆ. ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಸೇರ್ಪಡೆಯಾಗಲಿದ್ದಾರೆ. ಐಪಿಎಲ್‌ನಲ್ಲಿ ತಂಡದ ಆಟಗಾರರಿಗೆ ಈ ಗೌರವ ನೀಡುತ್ತಿರುವ ಮೊದಲ ತಂಡ ಆರ್ ಸಿಬಿ. ಮಾರ್ಚ್ 25ರಂದು ಭಾನುವಾರ ಆರ್ ಸಿಬಿ ತನ್ನ ಹೊಸ ಜೆರ್ಸಿಯನ್ನು ಅನಾವರಣ ಮಾಡಲಿದೆ.