ಅಮ್ಮಾ ನಾನೇನು ತಪ್ಪು ಮಾಡಿದೆʼ; 3 ತಿಂಗಳ ಮಗುವಿಗೆ ನೇಣು ಹಾಕಿ ಸಾವಿಗೆ ಶರಣಾದ ದಂಪತಿ

ಅಮ್ಮಾ ನಾನೇನು ತಪ್ಪು ಮಾಡಿದೆʼ; 3 ತಿಂಗಳ ಮಗುವಿಗೆ ನೇಣು ಹಾಕಿ ಸಾವಿಗೆ ಶರಣಾದ ದಂಪತಿ

ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ದಂಪತಿಗಳು ತಮ್ಮ ಮೂರು ತಿಂಗಳ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಹೈದರಾಬಾದ್ ಸಮೀಪದ ಚೆವೆಲ್ಲಾ ಮಂಡಲದ ದೇವರಪಲ್ಲಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಅಶೋಕ್ (30) ಮತ್ತು ಅಂಕಿತಾ (20) ತಮ್ಮ 3 ತಿಂಗಳ ಮಗುವಿಗೆ ನೇಣು ಹಾಕಿ, ನಂತ್ರ ದಂಪತಿಗಳೂ ಕೂಡ ನೇಣಿಗೆ ಕೊರಳೊಡ್ಡಿದ್ದಾರೆ.

ಮಗುವನ್ನು ನೇಣು ಹಾಕುವ ಮುನ್ನ ಅಶೋಕ್ ಫುಲ್ ವಾಲ್ಯೂಮ್‌ನೊಂದಿಗೆ ಟಿವಿ ಆನ್ ಮಾಡಿದ್ದರು. ಬಳಿಕ ದಂಪತಿ ನೇಣು ಬಿಗಿದುಕೊಂಡಿದ್ದಾರೆ. ಟಿವಿಯ ಶಬ್ದದಿಂದ ವಿಚಲಿತರಾದ ನೆರೆಹೊರೆಯವರು ಬಾಗಿಲು ತಟ್ಟಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಬಾಗಿಲು ಒಡೆದು ನೋಡಿದಾಗ ಮಗು ಮತ್ತು ಅಂಕಿತಾ ಮೃತಪಟ್ಟಿರುವುದು ಕಂಡು ಬಂದಿದೆ. ಅಶೋಕ್ ಇನ್ನೂ ಉಸಿರಾಡುತ್ತಿದ್ದರಿಂದ, ಅವರು ಅವನನ್ನು ಕೆಳಕ್ಕೆ ಇಳಿಸಿದರು. ಆದರೆ, ಕೆಲವು ನಿಮಿಷಗಳ ಆತನೂ ಸಾವನ್ನಪ್ಪಿದ್ದಾನೆ.

ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚೇವೆಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಂಪತಿಯ ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ, ಕೌಟುಂಬಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.