ಬೀದರಿನಲ್ಲಿ ಮೊಟ್ಟೆ ವಿತರಣೆಯಲ್ಲಿ ರಾಜಕೀಯ ತಿರುವು |Bidar|

ಮಕ್ಕಳ ಅಪೌಷ್ಟಿಕತೆ ಮತ್ತು ಶಿಕ್ಷಣದ ಹಿನ್ನೆಡೆ ಎರಡಕ್ಕೂ ಪರಸ್ಪರ ಸಂಬಂಧವಿದೆ. ಒಂದೆಡೆ, ಕಣ್ಣೊರೆಸುವ ತಂತ್ರವಾಗಿ ಸರ್ಕಾರ ಏಳು ಜಿಲ್ಲೆಗಳಲ್ಲಿ ಒಂದನೇ ತರಗತಿಯಿಂದ ಎಂಟನೆಯ ತರಗತಿಯವರೆಗಿನ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆ ವಿತರಿಸಲು ನಿರ್ಧರಿಸಿದೆ. ಮತ್ತೊಂದೆಡೆ, ಇದರ ವಿರುದ್ಧ ಸಣ್ಣ ಪ್ರತಿರೋಧ ಹುಟ್ಟುವಂತೆ ವ್ಯವಸ್ಥಿತವಾಗಿ ಪ್ಲಾನ್ ರೂಪಿಸಿದೆ ಎನ್ನುವ ದಟ್ಟವಾದ ಅನುಮಾನ ಸಾರ್ವಜನಿಕರಲ್ಲಿ ಎದ್ದಿದೆ. ಇದಕ್ಕೆ ಪುಷ್ಟಿಕರಿಸುವಂತೆ ಮುಖ್ಯಮಂತ್ರಿಗಳ ಕುಲಬಾಂಧವರಿಂದಲೆ ತಕರಾರು ಆರಂಭವಾಗಿದೆ. ಮಗುವನ್ನು ಚಿವುಟಿ ತೊಟ್ಟಿಲನ್ನು ತೂಗುತ್ತಿರುವ ಸರ್ಕಾರದ ಈ ನಡೆಯ ಹಿಂದೆ ಕುಟಿಲ ರಾಜಕಾರಣವನ್ನು ಹೊಂದಿರುವದನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ, ಸರ್ಕಾರದ ಬೊಕ್ಕಸಕ್ಕೆ ಇದು ವಿನಾಕಾರಣ ಹೊರೆಯಾಗುತ್ತದೆ ಎಂದು ಸರ್ಕಾರ ಭಾವಿಸಿದಂತಿದೆ. ಅದಕ್ಕೆ ಹೇಗಾದರೂ ಮಾಡಿ ಈ ಯೋಜನೆಗೆ ಫುಲ್ ಸ್ಟಾಪ್ ಹಾಕಬೇಕೆಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೆ ನಿರ್ಧರಿಸಿದ್ದಾರೆಂದು ರಾಜಕೀಯ ಪಡಸಾಲೆಯಲ್ಲಿ ಸುದ್ದಿ ಹರಿದಾಡುತ್ತಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆಯ ಜಾರಿಗೆ ನಮ್ಮ ಸರ್ಕಾರ ಸಿದ್ಧವಿದೆ.ಆದರೆ, ಏನು ಮಾಡುವುದು ಕೆಲವು ಜನರಿಂದ ಪ್ರತಿರೋಧ ಬಂದಿರುವುದರಿಂದ ಅನಿವಾರ್ಯವಾಗಿ ಈ ಕೋಳಿ ಮೊಟ್ಟೆ ನೀಡುವ ಯೋಜನೆಯನ್ನು ಕೈಬಿಟ್ಟಿದ್ದೇವೆ’ ಎಂದು ಸಾರ್ವಜನಿಕರಿಗೆ ಸಮಜಾಯಿಷಿ ನೀಡಲು ಬೊಮ್ಮಾಯಿ ಒಳ್ಳೆಯ ಪ್ಲಾನ್ ಹೆಣದಂತಿದೆ! ಒಂದು ವೇಳೆ ಈ ಯೋಜನೆ ಕೈ ಬಿಟ್ಟರೆ ಸರ್ಕಾರಕ್ಕೆ ಇದು ಉರುಳಾಗುವುದು ಶತಸ್ಸಿದ್ಧ. ರಾಜ್ಯ ಸರ್ಕಾರದ ನಡೆ ಅಪೌಷ್ಟಿಕ ಮಕ್ಕಳ ಕಡೆ ಅಥವಾ ಬಸವಣ್ಣನವರ ಭಕ್ತರ ಕಡೆ ಎಂಬುದು ಕಾದು ನೋಡಬೇಕು.