ಗಿಲಾನಿ ನಿಧನಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂತಾಪ, ಶೋಕಾಚರಣೆ ಘೋಷಣೆ

ನವದೆಹಲಿ: ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ (91) ನಿಧನಕ್ಕೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಂತಾಪ ಸೂಚಿಸಿದ್ದು, ಗಿಲಾನಿ ಅವರನ್ನು ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಇಮ್ರಾನ್ ಖಾನ್, 'ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರ ಸೈಯದ್ ಅಲಿ ಗಿಲಾನಿ ನಿಧನದ ವಾರ್ತೆತಿಳಿದು ಅತೀವ ದುಃಖವಾಯಿತು. ಅವರು ತಮ್ಮ ಜನರ ಹಕ್ಕಿಗಾಗಿ ಜೀವನಪರ್ಯಂತ ಹೋರಾಡಿದರು. ಭಾರತದಿಂದ ಸೆರೆವಾಸ ಮತ್ತು ಚಿತ್ರಹಿಂಸೆಯನ್ನು ಅನುಭವಿಸಿದರು. ಆದರೂ ದೃಢ ಸಂಕಲ್ಪದಿಂದ ಇದ್ದರು' ಎಂದು ಹೇಳಿದ್ದಾರೆ.
ಶೋಕಾಚರಣೆ ಘೋಷಣೆ
ಅಲ್ಲದೆ ಗಿಲಾನಿ ನಿಧನದ ಹಿನ್ನಲೆಯಲ್ಲಿ ಪಾಕಿಸ್ತಾನದಲ್ಲಿ ಒಂದು ದಿನದ ಅಧಿಕೃತ ಶೋಕಾಚರಣೆಯನ್ನು ಇಮ್ರಾಮ್ ಖಾನ್ ಘೋಷಿಸಿದ್ದಾರೆ.
'ಅವರ ಧೈರ್ಯಶಾಲಿ ಹೋರಾಟವನ್ನು ನಾವು (ಪಾಕಿಸ್ತಾನ) ಅಭಿನಂದಿಸುತ್ತೇವೆ. ಸದಾ ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತೇವೆ. ನಾವು ಪಾಕಿಸ್ತಾನಿಯರು ಮತ್ತು ಪಾಕಿಸ್ತಾನ ನಮ್ಮದಾಗಿದೆ, ಅವರ ನಿಧನದ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ ಅಧಿಕೃತ ಶೋಕಾಚರಣೆಯನ್ನು ಆಚರಿಸುತ್ತೇವೆ' ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.