ಸಮೃದ್ಧ ಫಸಲಿಗೆ, ಮಕ್ಕಳ ಭಾಗ್ಯಕ್ಕೆ ಜೋಕುಮಾರಸ್ವಾಮಿ ಆರಾಧನೆ

ಅಡ್ಡಡ್ಡ ಮಳಿ ಬಂದು ದೊಡ್ಡ ದೊಡ್ಡ ಕೆರೆ ತುಂಬಿ ಗುಡ್ಡಗಳೆಲ್ಲಾ ಹೈನಾಗಲಿ ಜೋಕುಮಾರಸ್ವಾಮಿ.. ಹೊಲ ಗದ್ದೆಗಳಲ್ಲಾ ಹಚ್ಚ ಹಸಿರಾಗಿ ಸಮೃದ್ಧ ಫಸಲು ನೀಡಿ ರೈತರ ಬವಣೆ ನೀಗಿಸು ಜೋಕುಮಾರಸ್ವಾಮಿ.. ಎಂದು ಹಾಡಿ ಹಾರೈಸುವ ಪದ್ದತಿಯನ್ನು ಸುಣಗಾರ ಮಹಿಳೆಯರು ಅನಾದಿ ಕಾಲದಿಂದಲೂ ಮುಂದುವರಿಸಿಕೊಂಡು ಬಂದಿದ್ದಾರೆ.
ಗಣೇಶ ಮೂರ್ತಿ ಪ್ರತಿಷಾ್ಠಪನೆಯ ಐದನೇ ದಿನ ಜನಿಸುವ ಜೋಕುಮಾರಸ್ವಶಮಿ ಮೂರ್ತಿಯನ್ನು ಹುತ್ತದ ಮಣ್ಣಿನಿಂದ ತಯಾರಿಸಿ ಅದನ್ನು ಬಿದರಿನ ಬುಟ್ಟಿಯಲ್ಲಿರಿಸಿ ಬೇವಿನ ಸೊಪ್ಪಿನಿಂದ ಅಲಂಕರಿಸಿ ತಲೆ ಮೇಲೆ ಹೊತ್ತು ರೈತರ ಮನೆ ಮನೆಗೆ ತೆರಳಿ ಜೋಕುಮಾರಸ್ವಾಮಿ ನೆನೆದು ಹಾಡುತ್ತಾರೆ. ಜೋಕುಮಾರಸ್ವಾಮಿಯ ಹಣೆಗೆ ವಿಭೂತಿ ಕುಂಕುಮ ಹಚ್ಚಿ ಶೃಂಗಾರ ಮಾಡುತ್ತಾರೆ ಜನರು ಜೋಕುಮಾರಸ್ವಾಮಿಗೆ ಪೂಜೆ ಸಲ್ಲಿಸಿ ಅಕ್ಕಿ ಜೋಳ ಹಣವನ್ನು ನೀಡುತ್ತಾರೆ. ನಂತರ ಜೋಕುಮಾರಸ್ವಾಮಿ ಕಾಡಿಗೆಯನ್ನು ಹಣೆಗೆ ಹಚ್ಚಿಕೊಂಡು ಅಂಬಲಿ ಮತ್ತು ಕಪ್ಪು ಕಾಡಿಗೆಯನ್ನು ಕೊಟ್ಟು ಬರುತ್ತಾರೆ.
ಮಕ್ಕಳಿಲ್ಲದವರು ಜೋಕುಮಾರಸ್ವಾಮಿ ತಲೆಯ ಮೇಲೆ ಹೊತ್ತ ಐದು ಮನೆಗಳಿಗೆ ತೆರಳಿ ಸಂಪ್ರದಾಯ ಮೆರೆದರೆ ಸಾಕು ಖಂಡಿತವಾಗಿ ಮಕ್ಕಳ ಭಾಗ್ಯ ಕರುಣಿಸುತ್ತಾನೆ ಎಂದು ಸುಣಗಾರ ಮನೆತನದ ಜೋಕುಮಾರಸ್ವಾಮಿ ಆರಾಧಕರಾದ ನೀಲಮ್ಮ ಬಾರಕೇರ, ಗಂಗಮ್ಮ ಮಾಡೋಳ್ಳಿ, ನೀಲಮ್ಮ ರಾಯಮಾರ ಹೇಳುತ್ತಾರೆ.