ಅಕ್ರಮ ಗಣಿಗಾರಿಕೆ ಕುರಿತು ಪರಿಶೀಲನೆ ನಡೆಸಲು ಹೈಕೋರ್ಟ್ ಸೂಚನೆ

ಅಕ್ರಮ ಗಣಿಗಾರಿಕೆ ಕುರಿತು ಪರಿಶೀಲನೆ ನಡೆಸಲು ಹೈಕೋರ್ಟ್ ಸೂಚನೆ

ಬೆಂಗಳೂರು: ತಿಪ್ಪಗೊಂಡನಹಳ್ಳಿ ಹಾಗೂ ಮಂಚನಬೆಲೆ ಜಲಾಶಯ ಸುತ್ತಮುತ್ತ ಯಾವುದೇ ಅಕ್ರಮ ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿಕೆ ನಂತರ
ಸಮಾಜ ಪರಿವರ್ತನಾ ಸಮಿತಿ 2017ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಹೈಕೋರ್ಟ್ ಮಂಗಳವಾರ ವಿಲೇವಾರಿ ಮಾಡಿತು.

ಆದಾಗ್ಯೂ, ಪ್ರತಿ ತಿಂಗಳು ರಾಜ್ಯ ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯತಕಾಲಿಕವಾಗಿ ತಪಾಸಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿತು ಮತ್ತು ಜಲಾಶಯಗಳ ಬಳಿ ಯಾವುದೇ ಅಕ್ರಮ ಗಣಿಗಾರಿಕೆಯನ್ನು ಗಮನಿಸಿದರೆ, ಅರ್ಜಿದಾರರು ಅಥವಾ ಇನ್ನಾವುದೇ ವ್ಯಕ್ತಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರಚಿಸಲಾದ ಕುಂದುಕೊರತೆ ಪರಿಹಾರ ಯಾಂತ್ರಿಕತೆಗೆ ದೂರು ನೀಡಬಹುದು, ಈ ಹಿಂದೆ ಅರ್ಜಿ ಸಲ್ಲಿಸಿದವರು ಕೂಡಾ ಮತ್ತೆ ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್ ನಿರ್ದೇಶಿಸಿತು

ಈ ಮಧ್ಯೆ ಜಲಾಶಯಗಳ ಸುತ್ತಮುತ್ತ ಕಲ್ಲು ಪುಡಿ ಮಾಡುವ ಘಟಕಗಳು, ಕಲ್ಲುಗಣಿಗಾರಿಕೆ ಘಟಕಗಳು ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಕೈಗೊಂಡ ಕ್ರಮಗಳ ಕುರಿತ ವರದಿಯನ್ನೊಳಗೊಂಡ ವಸ್ತುಸ್ಥಿತಿ ವರದಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನ್ಯಾಯಾಲಯಕ್ಕೆ ಸಲ್ಲಿಸಿತು.