ಆರ್ಕೆಸ್ಟ್ರಾ ಕಲಾವಿದರ ಕಣ್ಣೀರು ಸರ್ಕಾರಕ್ಕೆ ಕಾಣುತ್ತಿಲ್ಲವೇ | Hubli |

ಕಳೆದ ವರ್ಷ ಕೋವಿಡ್ನಿಂದಾಗಿ ನಾಟಕ ಪ್ರದರ್ಶನಗಳು, ಸಭೆ ಸಮಾರಂಭ ನಡೆಯದೆ ಕಲಾವಿದರು, ಮಾಲೀಕರು ತೀವ್ರ ಸಂಕಷ್ಟ ಎದುರಿಸಿದ್ದರು. ಇದೀಗ ಕೋವಿಡ್ ಎರಡನೇ ಅಲೆ ಮತ್ತೆ ಕಲಾವಿದರ ಬದುಕನ್ನು ತಲ್ಲಣಗೊಳಿಸಿದೆ. ಹೌದು.. ಆರ್ಕೆಸ್ಟ್ರಾ ಕಲೆಯನ್ನು ನಂಬಿಕೊಂಡು ಬದುಕುವ ಕಲಾವಿದರ ಕಷ್ಟ ನಿಜಕ್ಕೂ ಹೇಳತೀರದಾಗಿದೆ. ಸಮಾರಂಭದಲ್ಲಿ ಪ್ರದರ್ಶನ ನೀಡುವ ಆರ್ಕೆಸ್ಟ್ರಾ ಕಲಾವಿದರಿಗೆ ಸರ್ಕಾರ ಇದುವರೆಗೂ ಅನುಮತಿ ನೀಡದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸುಮಾರು ಎರಡು ವರ್ಷಗಳ ಕಾಲ ದುಡಿಮೆ ಇಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ. ನಮಗೂ ಕುಟುಂಬವಿದೆ. ಇದೇ ವೃತ್ತಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಮಕ್ಕಳು ಮನೆಯನ್ನು ನಿರ್ವಹಣೆ ಮಾಡಲು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಆರ್ಕೆಸ್ಟ್ರಾ ಕಲಾವಿದರು. ಒಟ್ಟಿನಲ್ಲಿ ಸರ್ಕಾರ ರಾಜಕೀಯ ಕಾರ್ಯಕ್ರಮ, ಚುನಾವಣೆ, ರಾಜಕೀಯ ನಾಯಕರ ಮಕ್ಕಳ ಕಾರ್ಯಕ್ರಮಕ್ಕೆ ಅನುಮತಿ ನೀಡುತ್ತದೆ. ಆದರೆ ನೊಂದವರ ಬದುಕಿಗೆ ಆಸರೆಯಾಗಬೇಕಿದ್ದ ಸರ್ಕಾರ ಮಾತ್ರ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಇರುವುದು ಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ.