6 ದಿನಗಳಲ್ಲಿ ತವರಿಗೆ ಮರಳಿದ ಆಸ್ಟ್ರೇಲಿಯಾ ತಂಡದ ಅರ್ಧದಷ್ಟು ಆಟಗಾರರು!

6 ದಿನಗಳಲ್ಲಿ ತವರಿಗೆ ಮರಳಿದ ಆಸ್ಟ್ರೇಲಿಯಾ ತಂಡದ ಅರ್ಧದಷ್ಟು ಆಟಗಾರರು!

ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿ ಆರಂಭವಾದಾಗನಿಂದ ಆಸ್ಟ್ರೇಲಿಯಾ ತಂಡದ ಗ್ರಹಚಾರವೇ ನೆಟ್ಟಗಿಲ್ಲದಂತಾಗಿದೆ. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ಬಳಿಕ ತಂಡಕ್ಕೆ ಹಲವು ಆಘಾತ ಎದುರಾಗಿದೆ.

ಆಟಗಾರರ ಗಾಯದ ಸಮಸ್ಯೆ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಕೆಲವು ಆಟಗಾರರು ಫಾರ್ಮ್ ಕಳೆದುಕೊಂಡು ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ಕಳೆದ ಆರು ದಿನಗಳಲ್ಲಿ ಆಸ್ಟ್ರೇಲಿಯಾ ತಂಡದ ಅರ್ಧದಷ್ಟು ಆಟಗಾರರು ತವರಿಗೆ ವಾ

ಪಸಾಗಿದ್ದು, 3ನೇ ಟೆಸ್ಟ್‌ಗೆ ಮುನ್ನ ತಂಡಕ್ಕೆ ದಿಕ್ಕೇ ತೋಚದಂತಾಗಿದೆ.

ಎರಡು ಟೆಸ್ಟ್ ಪಂದ್ಯಗಳನ್ನು ಸೋತ ಬಳಿಕ ಆಸ್ಟ್ರೇಲಿಯಾ ಆಟಗಾರರ ವಿರುದ್ಧ ಕಟುವಾದ ಟೀಕೆಗಳನ್ನು ಮಾಡಲಾಗುತ್ತಿದೆ. ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಸಿದ್ಧವಾಗಲು ಹೆಚ್ಚಿನ ಸಮಯ ಸಿಕ್ಕಿದ್ದರೂ ಹಲವು ಆಟಗಾರರು ತವರಿಗೆ ಮರಳಿದ್ದಾರೆ.

ಎರಡನೇ ಟೆಸ್ಟ್ ಮುಗಿದ ಬಳಿಕ ನಾಯಕ ಪ್ಯಾಟ್ ಕಮಿನ್ಸ್ ವೈಯಕ್ತಿಕ ಕೆಲಸದ ಮೇಲೆ ಆಸ್ಟ್ರೇಲಿಯಾಗೆ ತೆರಳಿದ್ದರು. ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಜೋಶ್ ಹೇಜಲ್‌ವುಡ್ ಕೂಡ ಗಾಯಗೊಂಡ ಬಳಿಕ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದು ತವರಿಗೆ ವಾಪಸ್ ಹೋಗಿದ್ದಾರೆ. ಇವರ ಜೊತೆಯಲ್ಲೇ ಇತರೇ ಆಟಗಾರರು ಕೂಡ ವಾಪಸ್ ಹೋಗಿದ್ದಾರೆ.


ತವರಿಗೆ ವಾಪಸಾದ ಹಲವು ಆಟಗಾರರು

ಮುಂದಿನ ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಸಿಗದಿರುವುದು ಖಚಿತವಾದ ಬಳಿಕ ತಂಡದ ಸ್ಪಿನ್ನರ್ ಆಷ್ಟನ್ ಅಗರ್ ಮತ್ತು ಬ್ಯಾಟರ್ ಮ್ಯಾಟ್ ರೆನ್‌ಶಾ ಕೂಡ ಆಸ್ಟ್ರೇಲಿಯಾಗೆ ವಾಪಸ್ ಹೋಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಶೆಫಲ್ಡ್ ಶೀಲ್ಡ್‌ ಟೂರ್ನಿಯಲ್ಲಿ ಇವರಿಬ್ಬರೂ ಆಡಲು ನಿರ್ಧರಿಸಿದ್ದಾರೆ. ಇವರಿಬ್ಬರ ಜೊತೆ ಲ್ಯಾನ್ಸ್ ಮೋರಿಸ್ ಕೂಡ ವಾಪಸ್ ತೆರಳಲಿದ್ದಾರೆ.

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಸ್ಪಿನ್ನರ್ ಟಾಡ್ ಮರ್ಫಿ ಕೂಡ ಸೈಡ್ ಸ್ಟ್ರೈನ್‌ಗೆ ತುತ್ತಾಗಿದ್ದು ಮುಂದಿನ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಅವರು ಕೂಡ ತವರಿಗೆ ವಾಪಸ್ ಹೋಗಲು ಸಿದ್ಧತೆ ನಡೆಸಿದ್ದಾರೆ.

ಭಾರತಕ್ಕೆ ಬರಲಿದ್ದಾರೆ ಪ್ಯಾಟ್ ಕಮಿನ್ಸ್

ತಂಡದ ಮತ್ತೊಬ್ಬ ಪ್ರಮುಖ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಕೂಡ ಮೊದಲನೇ ಟೆಸ್ಟ್ ಪಂದ್ಯದ ಬಳಿಕ ತವರಿಗೆ ವಾಪಸಾಗಿದ್ದರು. ಮಗುವಿನನ ನಿರೀಕ್ಷೆಯಲ್ಲಿದ್ದ ಅವರು ಕುಟುಂಬದ ಜತೆ ಕಾಲ ಕಳೆಯಲು ವಾಪಸಾಗಿದ್ದರು. ಕುಟುಂಬದವರ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾಗೆ ತೆರಳಿದ್ದು, ಅವರು ಮೂರನೇ ಟೆಸ್ಟ್ ಪಂದ್ಯಕ್ಕೆ ಮುನ್ನವೇ ಭಾರತಕ್ಕೆ ಮರಳಲಿದ್ದು, ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.

ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ವಾರ್ನರ್ ತೋಳಿಗೆ ಗಾಯಗೊಂಡಿದ್ದರು. ಮೂಳೆ ಮುರಿತಕ್ಕೆ ಒಳಗಾಗಿರುವ ಕಾರಣ ಅವರು ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದು, ಚೇತರಿಸಿಕೊಳ್ಳಲು ತವರಿಗೆ ಮರಳಿದ್ದಾರೆ.