ಸಿದ್ದರಾಮಯ್ಯಗೆ ಉತ್ತರ ಕೊಟ್ಟರೆ ಕೊಚ್ಚೆಗೆ ಕಲ್ಲು ಎಸೆದಂತೆ; ಸಂತೋಷ್

ಉಡುಪಿ, ಡಿಸೆಂಬರ್ 15; ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯವಿರುದ್ಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.
ಬುಧವಾರ ಉಡುಪಿಯಲ್ಲಿ ನಡೆದ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಬಿ. ಎಲ್. ಸಂತೋಷ್ ಮಾತನಾಡಿದರು. ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು. "ಸಿದ್ದರಾಮಯ್ಯ ಸಂಘವನ್ನು, ಆರ್‌ಎಸ್‌ಎಸ್ ಅನ್ನು ಪುಂಖಾನುಪುಂಖವಾಗಿ ಬೈಯುತ್ತಾ ಓಡಾಡುತ್ತಾರೆ" ಎಂದರು.
"ಬೆಂಗಳೂರಿನ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಡುವ ಸಂದರ್ಭದಲ್ಲಿ ಬದುಕಿಗೆ ಬೆಂಕಿ ಬಿದ್ದಂತೆ ಸಿದ್ಧರಾಮಯ್ಯ ವರ್ತಿಸಿದ್ದಾರೆ. ಸಿದ್ದರಾಮಯ್ಯ ಈಗಾಗಲೇ ಕಸದ ಬುಟ್ಟಿ ಗೆ ಸೇರಿದ್ದಾರೆ. ಮುಂದೆ ಅವರು ದೊಡ್ಡ ಕಸದ ಬುಟ್ಟಿಗೆ ಸೇರುತ್ತಾರೆ. ಸಿದ್ದರಾಮಯ್ಯರ ಎಲ್ಲಾ ಮಾತಿಗೆ ಉತ್ತರ ಕೊಡಬೇಕಿಲ್ಲ. ಜನ ಬಿಜೆಪಿಯನ್ನು ಆರಿಸೋದು ಇಂತವರ ಮಾತಿಗೆ ಪ್ರತಿಕ್ರಿಯೆ ನೀಡೋಕೆ ಅಲ್ಲ" ಎಂದು ಹೇಳಿದರು.
"ಪ್ರತಿ ಬಾರಿಯೂ ಸಿದ್ದರಾಮಯ್ಯ ಸಂಘದ ವಿರುದ್ಧ, ಸಾವರ್ಕರ್ ವಿರುದ್ಧ ಮಾತನಾಡಿದಾಗ ಎಲ್ಲರೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತ್ಯುತ್ತರ ನೀಡಲಿ ಅಂತಾ ಆಶಯಿಸುತ್ತಾರೆ. ಆದರೆ ಜನ ನಳಿನ್ ಕುಮಾರ್ ಕಟೀಲ್ ರನ್ನು ಆಯ್ಕೆ ಮಾಡಿದ್ದು ಸಿದ್ಧರಾಮಯ್ಯ ವಿರುದ್ಧ ಮಾತನಾಡೋಕೆ ಅಲ್ಲ. ಕಾಂಗ್ರೆಸ್ 70 ವರ್ಷದಿಂದ ದೇಶದಲ್ಲಿ ಏನು ಮಾಡಿಲ್ಲವೋ ಅದನ್ನು ಮಾಡುವುದಕ್ಕೆ" ಎಂದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿ, "ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರು ಬಲಿದಾನ ಮಾಡಿಲ್ಲ. ಬಿಜೆಪಿ ಬಲಿದಾನ ಮಾಡಿದವರ ಹೆಸರು ಹೇಳಿ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ. ಸಿದ್ದರಾಮಯ್ಯಗೆ ಧೈರ್ಯವಾಗಿ ಶ್ಯಾಮ ಪ್ರಸಾದ್ ಮುಖರ್ಜಿಯವರ ಹೆಸರನ್ನು ಹೇಳಿ. ಶಾಂತವಾಗಿ ಮನೆಯಲ್ಲಿ ಕುಳಿತುಕೊಂಡು ಶ್ಯಾಮಪ್ರಸಾದ್ ಮುಖರ್ಜಿ ಯಾರು? ಅಂತಾ ಓದಲಿ" ಎಂದುದ ಸಲಹೆ ನೀಡಿದರು.
"ಸಿದ್ದರಾಮಯ್ಯ ನಾಲಗೆಗೆ ಲಂಗು ಇಲ್ಲ, ಲಗಾಮೂ ಇಲ್ಲ. ಸಂಸ್ಕಾರವೂ ಇಲ್ಲ. ಆದರೆ ದೇವರು ಎಲ್ಲರಿಗೂ ಆತ್ಮಸಾಕ್ಷಿ ಎಂಬುವುದನ್ನು ನೀಡಿದ್ದಾನೆ. ಆದರೆ ಆತ್ಮಸಾಕ್ಷಿಯನ್ನು ಕೆಲವರು ಕೊಂದು ಹಾಕುತ್ತಾರೆ. ಅದರಲ್ಲಿ ನಮ್ಮ ವಿರೋಧ ಪಕ್ಷದ ನಾಯಕರೂ ಇದ್ದಾರೆ" ಎಂದು ಟೀಕಿಸಿದರು.
ಪರಿಷತ್ ಚುನಾವಣೆ ದಕ್ಷಿಣ ಕನ್ನಡ-ಉಡುಪಿ ದ್ವಿಸದಸ್ಯ ವಿಧಾನ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿ. ಎಲ್. ಸಂತೋಷ್, "ವಿಧಾನ ಪರಿಷತ್ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತದೆ. ಹೀಗಾಗಿ ಪರಿಷತ್ ರದ್ದುಗೊಳಿಸುವ ಸಮಯ ಬಂದಿದೆಯಲ್ಲವೇ? ಅಂತಾ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ಪ್ರಶ್ನಿಸಿದ್ದರು. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರದಲ್ಲಿ ಆ ಪ್ರಶ್ನೆ ಉದ್ಭವಿಸೋದಿಲ್ಲ. ಮತವನ್ನು ಮಾರಾಟ ಮಾಡಬಾರದು ಅದೊಂದು ನಡವಳಿಕೆ. ನಾನು ಮಾರಾಟಕ್ಕಿಲ್ಲ ಅನ್ನೋದು ಪ್ರತಿ ರಾಜಕಾರಣಿಗೆ ಇರಬೇಕಾದ ಅತೀ ದೊಡ್ಡ ಗುಣವಾಗಬೇಕು. ದಕ್ಷಿನ ಕನ್ನಡ-ಉಡುಪಿಯ ಶೇ 99ರಷ್ಟು ಜನ ನಾವು ಮಾರಾಟಕ್ಕಿಲ್ಲ ಎಂಬುವುದನ್ನು ತೋರಿಸಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗಿ ಉಡುಪಿಯ ಕೃಷ್ಣ ಮಠದಲ್ಲಿ ನಡೆಯುತ್ತಿರುವ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿಯೂ ಬಿ. ಎಲ್. ಸಂತೋಷ್ ಭಾಗಿಯಾದರು. ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, "ಸಮಾಜದಲ್ಲಿ ಜನಸಂಖ್ಯೆಯ ಅನುಪಾತ ಗಮನಿಸಬೇಕು. ವ್ಯತ್ಯಾಸ ಆಗುತ್ತಿದೆಯೇ? ಅಂತಾ ನೋಡಬೇಕು. ನೆರೆಹೊರೆ ಸುರಕ್ಷಿತ ವಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ. ಚುನಾವಣೆಯಲ್ಲಿ ಕೆಲವು ಕ್ಷೇತ್ರದಲ್ಲಿ ಮುಸಲ್ಮಾನರೇ ಗೆಲ್ತಾರೆ, ಗೆಲ್ಲಲಿ ಪರವಾಗಿಲ್ಲ. ಆದರೆ ಬೇರೆ ಯಾರೂ ಗೆಲ್ಲೋ ಹಾಗಿಲ್ಲ ಅಂದರೆ ಹೇಗೆ ಸಾಧ್ಯ?. ಲವ್ ಜಿಹಾದ್‌ಗೆ ನಮ್ಮ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಮನೆ ಮತ್ತು ಸಮಾಜ ಮಕ್ಕಳನ್ನು ಸರಿಯಾಗಿ ಬೆಳಸದ ಪರಿಣಾಮ ಇದಾಗಿದೆ" ಎಂದರು.
"ನಮ್ಮ ಸುತ್ತಮುತ್ತ ವ್ಯವಸ್ಥೆಯಲ್ಲಿನ ಭಯೋತ್ಪಾದನೆ ಗುರುತಿಸಬೇಕು. ರಾಮ-ಕೃಷ್ಣರ ಹೆಸರು ಹೇಳಿಕೊಂಡು ಬದುಕಲು ಸಾಧ್ಯವಿಲ್ಲ. ಈಗ ನಡೆಸ ಬೇಕಾದ ಕರ್ಮ ನಡೆಸಲೇಬೇಕು. ಒಗ್ಗಟ್ಟು ಪ್ರದರ್ಶನ ಮಾಡಬೇಕು. ಜಾತಿ, ಊರು, ಧರ್ಮದ ಹೆಸರಲ್ಲಿ ಒಗ್ಗಟ್ಟು ಬೇಕು. ಪ್ರೇಮಕ್ಕೂ, ಪ್ರೀತಿಗೂ ಲವ್ ಜಿಹಾದ್‌ಗೂ ಸಂಬಂಧವೇ ಇಲ್ಲ" ಎಂದು ಹೇಳಿದರು.
"ವೀರಶೈವ ಮಹಾಸಭಾದವರು ಮತಾಂತರದ ವಿರುದ್ದ ಸಣ್ಣ ಸಣ್ಣ ತಂಡ ಮಾಡಿದ್ದಾರೆ. ಮತಾಂತರದ ಅಪಾಯ ಗ್ರಹಿಸಿದೆ. ಮತಾಂತರ ನಿಷೇಧ ಕಾಯಿದೆ ರಾಜ್ಯದಲ್ಲಿ ಜಾರಿಯಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದಾರೆ. ಸರ್ಕಾರ ಕಾನೂನು ಜಾರಿ ಮಾಡುತ್ತದೆ ನಿಜ. ಆದರೆ ಯಾವತ್ತೂ ಕಾನೂನು ಮಾತ್ರ ಪರಿಹಾರ ಅಲ್ಲ. ಸಮಾಜ ಜಾಗರೂಕವಾಗಿದ್ದರೆ ಮಾತ್ರ ಕಾನೂನು ಪ್ರಯೋಜನವಾಗುತ್ತದೆ" ಎಂದು ತಿಳಿಸಿದರು.