ಹೆಣದಲ್ಲೂ ಹಣ ಲೂಟಿ ಹೊಡೆಯುವ ಸರ್ಕಾರವಿದು: ಡಿಕೆಶಿ ವಾಗ್ದಾಳಿ

ಹೆಣದಲ್ಲೂ ಹಣ ಲೂಟಿ ಹೊಡೆಯುವ ಸರ್ಕಾರವಿದು: ಡಿಕೆಶಿ ವಾಗ್ದಾಳಿ

ಚಿತ್ರದುರ್ಗ, ಜೂನ್ 12: ""ಮಹಾಮಾರಿ ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದು, ಅನೇಕ ಸಾವು- ನೋವುಂಟಾದ ಹಿನ್ನೆಲೆಯಲ್ಲಿ ಹೆಣ ಸುಡುವುದಕ್ಕೂ ಸರದಿ, ಆಸ್ಪತ್ರೆ ಸೇರುವುದಕ್ಕೂ ಸರದಿ, ಬೆಡ್‌ಗಳಿಗೂ ಸರದಿ ನಿಲ್ಲುವಂತಾಯ್ತು'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

"ಔಷಧಿ ಹಾಗೂ ಲಸಿಕೆ ಪಡೆಯಲು ಜನರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿರುವ ಬಿಜೆಪಿ ಸರ್ಕಾರ, ಇನ್ನೇನು ಜನರನ್ನು ಕಾಪಾಡಿದೆ. ಹೆಣದಲ್ಲೂ ಹಣ ಲೂಟಿ ಮಾಡುವ ಸರ್ಕಾರವಿದು. ದೇಶಕ್ಕೆ ಕೊರೊನಾ ಖಾಯಿಲೆ ತಂದದ್ದು ಯಾರು? ನಾವು ತಂದಿದ್ದೇವಾ?'' ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ""ನಿನ್ನೆ ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿದ್ದೇವೆ. ನಾಳೆ ಹೋಬಳಿ, ಜಿಲ್ಲಾ ಪಂಚಾಯಿತಿ ಕೇಂದ್ರಗಳಲ್ಲಿ, ನಾಡಿದ್ದು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಉಳಿದಂತೆ ಐದು ದಿನ ಐದು ಸಾವಿರ ಕಡೆ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರತಿಭಟನೆ ಮಾಡಲಾಗುವುದು'' ಎಂದು ತಿಳಿಸಿದರು.

ಇದು ಕೇವಲ ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಬಿಜೆಪಿ, ಜನತಾದಳದ ಎಲ್ಲ ನೊಂದ ಜನರ ಕಾರ್ಯಕ್ರಮವಾಗಿದೆ. ಇದೊಂದೇ ವರ್ಷದಲ್ಲಿ 18 ಬಾರಿ ಬೆಲೆ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆ 100 ರೂಪಾಯಿ ಮುಟ್ಟಿರುವುದೇ ದೊಡ್ಡ ಸಾಧನೆಯಾಗಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದರು. ""ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್ ಯಡಿಯೂರಪ್ಪ ಅವರೇ, ಪೆಟ್ರೋಲ್ ಬೆಲೆ ಏರಿಸಿದ್ರಿ, ಆದರೆ ರೈತರಿಗೆ ಬೆಂಬಲ ಬೆಲೆ ಏರಿಸಿದ್ರಾ? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಜನ ಬಿಜೆಪಿ ಸರ್ಕಾರಕ್ಕೆ ಉಗಿಯುತ್ತಿದ್ದಾರೆ'' ಎಂದು ವ್ಯಂಗ್ಯವಾಡಿದರು. ಇನ್ನು ಸಿಎಂ ಬದಲಾವಣೆ ವಿಷಯ ಪ್ರತಿಕ್ರಿಯೆ ನೀಡಿದ ಡಿಕೆಶಿ, ""ಅವರು ತೋರಿಸುವ ಸಿನಿಮಾ ನೋಡುತ್ತೇವೆ'' ಎಂದರು.

ಸಾಮಾಜಿಕ ಅಂತರ ಮಾಯ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಂದ ಹಿನ್ನೆಲೆ, ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಹಾಗೂ ಪ್ರತಿಭಟನಾ ಸ್ಥಳದಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಮಾಡಿದ್ದಾರೆ. ರಾಕ್ ಮಂಜು ಮನೆಗೆ ಉಪಹಾರಕ್ಕೆ ಬಂದ ಡಿಕೆಶಿಯವರನ್ನು ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದರು.