ಹಾವೇರಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಕ್ರೋಶ; ಪಕ್ಷ ತೊರೆದ ಜಿಲ್ಲಾ ಅಧ್ಯಕ್ಷ!

ಹಾವೇರಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಕ್ರೋಶ; ಪಕ್ಷ ತೊರೆದ ಜಿಲ್ಲಾ ಅಧ್ಯಕ್ಷ!

ಹಾವೇರಿ: ವಿಧಾನಸಭೆ ಚುನಾವಣೆಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಭಿನ್ನಮತ ಆರಂಭವಾಗಿದ್ದು, ಹಾವೇರಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಆಕ್ರೋಶ ಭುಗಿಲೆದ್ದಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಕಾಂಗ್ರೆಸ್ ಪ್ರಾಥಮಿಕ ‌ಸದಸ್ಯತ್ವಕ್ಕೆ ಎಂ.ಎಂ. ಹಿರೇಮಠ ರಾಜೀನಾಮೆ ನೀಡಿದ್ದಾರೆ.

ನಾಲ್ಕು ವರ್ಷದಿಂದ ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಸುತ್ತಿದ್ದ ಎಂ.ಎಂ. ಹಿರೇಮಠ ಅವರು ಹಾವೇರಿ ಎಸ್ ಸಿ ಮೀಸಲು ಕ್ಷೇತದಕೈ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಮಾಜಿ ಸಚಿವ ರುದ್ರಪ್ಪ ಲಮಾಣಿಗೆ ಕೈ ಟಿಕೆಟ್ ಘೋಷಣೆಯಿಂದ ಹಿರೇಮಠ್ ಅಸಮಾಧಾನಗೊಂಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರ ಬರೆದಿರುವ ಹಿರೇಮಠ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಒಬ್ಬೊಬ್ಬರಾಗಿ ಪಕ್ಷ ತೊರೆಯುತ್ತಿದ್ದು, ಹಾನಗಲ್ಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಮನೋಹರ ತಹಸೀಲ್ದಾರ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ. ರಾಣೇಬೆನ್ನೂರ, ಬ್ಯಾಡಗಿಯಲ್ಲಿಯು ಪಕ್ಷ ತೊರೆಯಲು ಕೆಲವು ಕೈ ಮುಖಂಡರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.