ಸೋಲಿಗೆ ಟಿಕೆಟ್ ಕೊಡಿಸಿದವರೇ ಹೊಣೆ
ಬೆಂಗಳೂರು: ವಿಧಾನಪರಿಷತ್ ಚುನಾ ವಣೆ ಟಿಕೆಟ್ ಹಂಚಿಕೆಯ ಅನಂತರ ಕಾಂಗ್ರೆಸ್ನಲ್ಲಿ ಭುಗಿಲೇಳುತ್ತಿರುವ ಅಸಮಾಧಾನ ಹೈಕಮಾಂಡ್ ಅಂಗಳದ ವರೆಗೂ ತಲುಪಿದೆ.
ಪಕ್ಷದ ಆಂತರಿಕ ಕಚ್ಚಾಟ ಫಲಿತಾಂಶದ ಮೇಲೆ ಪರಿಣಾಮ ಬೀರಿದರೆ ಟಿಕೆಟ್ಗಾಗಿ ಒತ್ತಡ ಹಾಕಿದ ನಾಯಕರೇ ಹೊಣೆ ಹೊರಬೇಕು ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ.
ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಟಿಕೆಟ್ ಹಂಚಿಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಸ್ಥಳೀಯ ಮುಖಂಡರ ಜತೆ ಸಮನ್ವಯ ಸಾಧಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ಅಭ್ಯರ್ಥಿ ಯನ್ನು ಆಯ್ಕೆ ಮಾಡಬೇಕು ಎಂದು ಹೈಕಮಾಂಡ್ ಮೊದಲೇ ಸೂಚಿಸಿತ್ತು. ಆದರೆ ರಾಜ್ಯದ ನಾಯಕರು “ಕೋಟಾ’ ಪದ್ಧತಿಯಡಿ ತಮ್ಮ ಬೆಂಬಲಿಗರು, ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರು. ಈಗ ಟಿಕೆಟ್ ಹಂಚಿಕೆಯ ಅನಂತರದ ಬೆಳವಣಿಗೆಗಳು ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿವೆ. ಹೀಗಾಗಿ ರಾಜ್ಯ ಉಸ್ತುವಾರಿ ಮೂಲಕವೇ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
ಹಲವು ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಮತ್ತು ಆಂತರಿಕ ಕಚ್ಚಾಟದ ಹೊಡೆತದ ಬಗ್ಗೆ ಹೈಕಮಾಂಡ್ಗೆ ವರದಿ ಹೋಗಿದೆ. ಜೆಡಿಎಸ್ ಸ್ಪರ್ಧಿಸದ ಕಡೆ ಬೆಂಬಲ ಕೋರುತ್ತೇವೆ ಎನ್ನುವ ಮೂಲಕ ಬಿಜೆಪಿ ಜಾಣ ನಡೆ ಅನುಸರಿಸುತ್ತಿದೆ. ಆದರೆ ಕಾಂಗ್ರೆಸ್ ನಾಯಕರ ಪ್ರತಿಷ್ಠೆ ಮತ್ತು ಟಿಕೆಟ್ ಹಂಚಿಕೆಯಲ್ಲಿನ ವ್ಯತ್ಯಾಸದಿಂದ ಗೆಲ್ಲುವ ಅವಕಾಶ ಇರುವ ಕಡೆ ಕಗ್ಗಂಟಾಗುತ್ತಿದೆ ಎಂಬ ಅಂಶ ವರದಿಯಲ್ಲಿದೆ ಎನ್ನಲಾಗಿದೆ.
ಎಚ್ಡಿಕೆ ಕೆಣಕಿದರಾ?
ಹಾನಗಲ್, ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧ ಅನುಸರಿಸಿದ ತಂತ್ರವನ್ನೇ ವಿಧಾನಪರಿಷತ್ ಚುನಾವಣೆಯಲ್ಲೂ ಮುಂದುವರಿಸುತ್ತಿರುವ ಬಗ್ಗೆ ಕಾಂಗ್ರೆಸ್ ವಲಯ ದಲ್ಲೇ ಅಪಸ್ವರ ವ್ಯಕ್ತವಾಗಿದೆ. ಕುಮಾರಸ್ವಾಮಿ ಮತ್ತು ದೇವೇಗೌಡರನ್ನು ಕೆಣಕಿರುವುದು ಕಾಂಗ್ರೆಸ್ಗೆ ಮುಳುವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೂಂದೆಡೆ, ಕೆಲವು ಕ್ಷೇತ್ರಗಳಲ್ಲಿ ಕುಮಾರಸ್ವಾಮಿ “ರಂಗಪ್ರವೇಶ’ ಮಾಡಿದ್ದು, ಅಲ್ಲಿನ ಚಿತ್ರಣ ಬದಲಾಗುವ ಲಕ್ಷಣಗಳು ಕಂಡುಬರುತ್ತಿವೆ.