ಕಲಬುರ್ಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸಂಚಾಲಿತ ಸೇವಾ ಭಾರತಿ ವತಿಯಿಂದ ನಗರದಲ್ಲಿ ಉಚಿತ ಆಂಬುಲೆನ್ಸ್ ಸೇವೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ದತ್ತಾತ್ರೇಯ ಪಾಟೀಲ, ಶಾಸಕ ಬಸವರಾಜ ಮತ್ತಿಮೂಡ ಮಂಗಳವಾರ ಚಾಲನೆ ನೀಡಿದರು.
ದತ್ತಾತ್ರೇಯ ಪಾಟೀಲ ಮಾತನಾಡಿ, 'ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಕೋವಿಡ್ ಕೇರ್ ಸೆಂಟರ್ ಪ್ರಾರಂಭ ಮಾಡಿರುವ ಆರ್‌ಎಸ್‌ಎಸ್ ಇದೀಗ ಬಡ ಜನರಿಗೆ ಕೋವಿಡ್ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ಈ ಸೇವೆಯನ್ನು ನೀಡಲಿದೆ. ಕೊರೊನಾ ಪಾಸಿಟಿವ್ ಕಂಡು ಬಂದ ನಂತರ ಸೋಂಕಿತರಿಗೆ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಈ ಸೇವೆ ಅನುಕೂಲಕರವಾಗಲಿದೆ' ಎಂದರು.
ಸಂಘ ಪರಿವಾರದ ಪ್ರಮುಖರಾದ ಕೃಷ್ಣ ಜೋಶಿ, ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ರಮೇಶ್ ತಿಪನೂರ, ಕಮಲಾಪುರೆ, ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ, ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಉಮೇಶ ಪಾಟೀಲ, ಶ್ರೀನಿವಾಸ ದೇಸಾಯಿ, ದಿವ್ಯಾ ಹಾಗರಗಿ ಹಾಗೂ ಸಂಘ ಪರಿವಾರದ ಸದಸ್ಯರು ಇದ್ದರು.