ಸುವರ್ಣಸೌಧದ ಎದುರು ಲಿಂಗಾಯತ ಸಮಾವೇಶ ; ರಾ.ಹೆ.48ರಲ್ಲಿ ಮಾರ್ಗ ಬದಲಾವಣೆ

ಬೆಳಗಾವಿಯ ಸುವರ್ಣ ಸೌಧದ ಎದುರು ಡಿ.22 ಲಿಂಗಾಯತ ಸಮಾಜದ ಬೃಹತ್ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.ಈ ಕುರಿತು ಪ್ರಕಟಣೆ ನೀಡಿರುವ ಬೆಳಗಾವಿ ಪೊಲೀಸ್ ಆಯುಕ್ತರು, ಸಮಾವೇಶದ ಅಂಗವಾಗಿ ಹಿರೆಬಾಗೇವಾಡಿಯಿಂದ ಬಸ್ತವಾಡವರೆಗೆ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಯು ಬೆಳಗಾವಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 48ರ ಮೂಲಕ ಸಾಗಲಿದ್ದು, ಸುಮಾರು 4 ರಿಂದ 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಸುಗಮ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಬೆಳಗಾವಿಯಿಂದ ಹಿರೆಬಾಗೇವಾಡಿ ಮಾರ್ಗವಾಗಿ ಧಾರವಾಡ ಕಡೆಗೆ ಹೋಗುವ ಲಘು ವಾಹನಗಳು ರಾಷ್ಟ್ರೀಯ ಹೆದ್ದಾರಿ 48ರ ಎಡಬದಿಯ ಮಾರ್ಗವನ್ನು ಉಪಯೋಗಿಸಬೇಕು.ಬೆಳಗಾವಿಯಿಂದ ಧಾರವಾಡ ಕಡೆಗೆ ಹೋಗುವ ಭಾರಿ ವಾಹನಗಳ ಸಂಚಾರವನ್ನು ಬಾಗೇವಾಡಿ ಮಾರ್ಗವಾಗಿ ಹೋಗುವುದನ್ನು ನಿಷೇಧಿಸಲಾಗಿದೆ. ಭಾರಿ ವಾಹನಗಳು ಬೆಳಗಾವಿಯಿಂದ ಸಾಂಬ್ರಾ-ನೇಸರ್ಗಿ-ಬೈಲಹೊಂಗಲ ಕ್ರಾಸ್-ಎಂ.ಕೆ.ಹುಬ್ಬಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸೇರಬೇಕು.ಧಾರವಾಡ ಕಡೆಯಿಂದ ಬೆಳಗಾವಿಗೆ ಬರುವ ಲಘು ವಾಹನಗಳು ಬಾಗೇವಾಡಿ ಟೋಲ್ ನಾಕಾ ದಾಟಿದ ನಂತರ ಬಲಗಡೆಯ ರಸ್ತೆಗೆ ಹೋಗಬೇಕು. ಎಡಗಡೆಯ ರಸ್ತೆಯಲ್ಲಿ ಪಾದಯಾತ್ರೆ ಇರುವುದರಿಂದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬಲಗಡೆಯ ರಸ್ತೆಯನ್ನು ಕಿರ್ಲೋಸ್ಕರ್ ಶೋ ರೂಂ ವರೆಗೆ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ಆದ್ದರಿಂದ, ಸಾರ್ವಜನಿಕರು ಬದಲಾದ ಮಾರ್ಗದಲ್ಲಿ ಸಂಚರಿಸಿ ಸಹಕರಿಸಬೇಕೆಂದು ಪೊಲೀಸ್ ಆಯುಕ್ತರು ಕೋರಿದ್ದಾರೆ.