ದಳಪತಿ ವಿಜಯ್ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ? 'ಸಿಂಪಲ್ ಸ್ಟಾರ್'ಗೆ ಕಾಲಿವುಡ್ನಲ್ಲಿ ಬೇಡಿಕೆ
ಕನ್ನಡದ ಸ್ಟಾರ್ ನಟರಕ್ಷಿತ್ ಶೆಟ್ಟಿ (Rakshit Shetty)ಅವರಿಗೆ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ.
ದಳಪತಿ ವಿಜಯ್ ನಟನೆಯ 'ವಾರಿಸು' ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿ ಉತ್ತಮ ಕಮಾಯಿ ಮಾಡಿದೆ. ಆ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್. ಈಗ ವಿಜಯ್ ಜೊತೆ ನಟಿಸುವ ಅವಕಾಶ ರಕ್ಷಿತ್ ಶೆಟ್ಟಿಗೂ ಸಿಗುತ್ತಿದೆ ಎಂಬ ಮಾಹಿತಿ ಕೇಳಿಬಂದಿದೆ. 'ದಳಪತಿ 67' ಸಿನಿಮಾಗೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಇದರ ಶೂಟಿಂಗ್ ಆರಂಭ ಆಗಿದೆ. ರಕ್ಷಿತ್ ಶೆಟ್ಟಿ ಜೊತೆ ಮಾತುಕತೆ ನಡೆದಿರುವ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಘೋಷಣೆ ಆಗಿಬೇಕಿದೆ.
ರಕ್ಷಿತ್ ಶೆಟ್ಟಿ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನಟನಾಗಿ ಮಾತ್ರವಲ್ಲದೆ, ನಿರ್ದೇಶಕ ಹಾಗೂ ನಿರ್ಮಾಪಕನಾಗಿಯೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ದಳಪತಿ ವಿಜಯ್ ನಟನೆಯ ಸಿನಿಮಾದಲ್ಲಿ ಬಣ್ಣ ಹಚ್ಚಲು ಇನ್ನೂ ಒಪ್ಪಿಕೊಂಡಿಲ್ಲ. ಸಹಿ ಮಾಡಿದ ಬಳಿಕವಷ್ಟೇ ಪಕ್ಕಾ ಸುದ್ದಿ ಹೊರಬೀಳಲಿದೆ.
ಲೋಕೇಶ್ ಕನಗರಾಜ್ ಅವರು ಸ್ಟಾರ್ ನಿರ್ದೇಶಕನಾಗಿ ಮಿಂಚುತ್ತಿದ್ದಾರೆ. 'ಕೈದಿ', 'ಮಾಸ್ಟರ್', 'ವಿಕ್ರಮ್' ಮುಂತಾದ ಸಿನಿಮಾಗಳ ಮೂಲಕ ಅವರು ತಮ್ಮ ಛಾಪು ಮೂಡಿಸಿದ್ದಾರೆ. ಕಮಲ್ ಹಾಸನ್ ನಟನೆಯ 'ವಿಕ್ರಮ್' ಚಿತ್ರಕ್ಕೂ ಕಾರ್ತಿ ನಟನೆಯ 'ಕೈದಿ' ಚಿತ್ರಕ್ಕೂ ಲೋಕೇಶ್ ಅವರು ಕನೆಕ್ಷನ್ ಇಟ್ಟಿದ್ದರು. ಈಗ 'ದಳಪತಿ 67' ಕೂಡ ಅದೇ ಮಾದರಿಯಲ್ಲಿ ತಯಾರಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಅದರಲ್ಲಿ ರಕ್ಷಿತ್ ಶೆಟ್ಟಿಗೆ ಯಾವ ಪಾತ್ರ ಸಿಗಬಹುದು ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಬಿಡುಗಡೆಗೆ ಹತ್ತಿರವಾಗುತ್ತಿದೆ. ಇನ್ನು, ಅವರದೇ ನಿರ್ದೇಶನದಲ್ಲಿ ಮೂಡಿಬರಲಿರುವ 'ರಿಚರ್ಡ್ ಆಂಟನಿ' ಸಿನಿಮಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.