'ಪ್ರೇಮಂ ಪೂಜ್ಯಂ' ಎಂಬ ಅಪ್ಪಟ ಲವ್ ಸ್ಟೋರಿ
“ಲವ್ಲಿ ಸ್ಟಾರ್’ ಪ್ರೇಮ್ ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ, “ಪ್ರೇಮಂ ಪೂಜ್ಯಂ’. ಹೀಗೊಂದು ಸುಂದರ ಶೀರ್ಷಿಕೆಯ ಅವರ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಹೌದು, ಪ್ರೇಮ್ ನಟನೆಯ 25ನೇ ಚಿತ್ರ “ಪ್ರೇಮಂ ಪೂಜ್ಯಂ’ ಚಿತ್ರ ನ.12ರಂದು ಬಿಡುಗಡೆಯಾಗುತ್ತಿದೆ.
ಚಿತ್ರದ ಹೆಸರೇ ಹೇಳುವಂತೆ, “ಪ್ರೇಮಂ ಪೂಜ್ಯಂ’ ರೊಮ್ಯಾಂಟಿಕ್ ಲವ್ ಸ್ಟೋರಿ ಹೊಂದಿರುವ ಚಿತ್ರ. ಚಿತ್ರದಲ್ಲಿ ಪ್ರೀತಿಯ ಆರಾಧಕನಾಗಿ ಲವ್ಲಿ ಸ್ಟಾರ್ ಪ್ರೇಮ್ ಕಾಣಿಸಿಕೊಂಡರೆ, ನವ ನಾಯಕಿಯಾಗಿ ಬೃಂದಾ ಆಚಾರ್ಯ ಅಭಿನಯಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಘವೇಂದ್ರ ಬಿ.ಎಸ್ “ಪ್ರೇಮಂ ಪೂಜ್ಯಂ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಸ್ಯಾಂಡಲ್‌ವುಡ್ ಅಂಗಳಕ್ಕೆ ನಿರ್ದೇಶಕನಾಗಿ ಪರಿಚಯವಾಗುತ್ತಿದ್ದಾರೆ.
“ಸುಮಾರು ನಾಲ್ಕೈದು ವರ್ಷದ ಹಿಂದೆಯೇ ಈ ಸಬ್ಜೆಕ್ಟ್ ಮೇಲೆ ಸಿನಿಮಾ ಮಾಡುವ ಯೋಚನೆಯಿಂದ ಕೆಲಸ ಆರಂಭಿಸಿದ್ದೆ. ಕನ್ನಡದ ಪ್ರೇಕ್ಷಕರಿಗೆ ಇಷ್ಟವಾಗುವಂಥ, ಜೊತೆಗೆ ಮನಮುಟ್ಟುವಂಥ ಕಥೆಯೊಂದನ್ನ ಈ ಸಿನಿಮಾದಲ್ಲಿ ಹೇಳುತ್ತಿದ್ದೇವೆ. ಇಲ್ಲಿ ಲವ್, ಫ್ರೆಂಡ್‌ಶಿಪ್, ಕಾಮಿಡಿ, ಎಮೋಷನ್ಸ್ ಎಲ್ಲವೂ ಇದೆ. ಕನ್ನಡ ಪ್ರೇಕ್ಷಕರಿಗೆ ಇದೊಂದು ಹೊಸ ಥರದ ಅನುಭವ ಕೊಡುವ ಸಿನಿಮಾ ಆಗಲಿದೆ. “ಪ್ರೇಮಲೋಕ’ ಸಿನಿಮಾದ ನಂತರ “ಪ್ರೇಮಂ ಪೂಜ್ಯಂ’ ಕನ್ನಡದಲ್ಲಿ ಮತ್ತೂಂದು ಮ್ಯೂಸಿಕಲ್ ಹಿಟ್ ಸಿನಿಮಾ ಆಗುತ್ತದೆ’ ಎನ್ನುವ ಭರವಸೆಯ ಮಾತುಗಳನ್ನಾಡುತ್ತಾರೆ.
“ಕೆದಂಬಾಡಿ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ “ಪ್ರೇಮ ಪೂಜ್ಯಂ’ ಚಿತ್ರಕ್ಕೆ ಡಾ. ರಕ್ಷಿತ್ ಕೆಡಂಬಾಡಿ, ಡಾ. ರಾಜಕುಮಾರ್ ಜಾನಕಿರಾಮನ್, ಮನೋಜ್ ಕೃಷ್ಣನ್ ಬಂಡವಾಳ ಹೂಡಿದ್ದಾ. ಚಿತ್ರಕ್ಕೆ ಮಾಧವ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ.