ಗಂಧದಗುಡಿ 100 ದಿನ ಪೂರೈಸಿದ ಹಿನ್ನೆಲೆ ಜಯನಗರ ಉದ್ಯಾನವನಕ್ಕೆ ಗಂಧದಗುಡಿ ಹೆಸರು; ಸಸಿನೆಟ್ಟು ಅಶ್ವಿನಿ ಪುನೀತ್ ರಾಜ್ಕುಮಾರ್ ಚಾಲನೆ

ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದಗುಡಿ 100 ದಿನ ಪೂರೈಸಿದ ಹಿನ್ನೆಲೆ ಗಂಧದಗುಡಿ ಹಬ್ಬ ಆಚರಣೆ ಮಾಡಲಾಯಿತು. 101 ಗಿಡಗಳನ್ನ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್ಕುಮಾರ್, ಅಪ್ಪುವಿನ ಪರಿಸರ ಪ್ರೀತಿಯನ್ನ ಮತ್ತೆ ಎತ್ತಿಹಿಡಿದರು. ಶಾಸಕಿ ಸೌಮ್ಯರೆಡ್ಡಿ ಹಾಗೂ ಬಿಬಿಎಂಪಿ ಆಯೋಜಿಸಿದ್ದ, ಈ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್, ಗಂಧದಗುಡಿ ನಿರ್ದೇಶಕ ಅಮೋಘವರ್ಷ ಸಾಕ್ಷಿಯಾದರು.ಇನ್ನು ಗಂಧದಗುಡಿ ಹಬ್ಬಕ್ಕೆ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಮತ್ತಷ್ಟು ಮೆರಗು ಹೆಚ್ಚಿಸಿದರು. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳನ್ನ ಬಿಡಿಸಿದ ವಿದ್ಯಾರ್ಥಿಗಳು ಅಶ್ವಿನಿ ಪುನೀತ್ ರಾಜ್ಕುಮಾರ್ ಕಂಡು ಫುಲ್ ಖುಷ್ ಆಗಿದ್ದರು.
ಒಟ್ಟಿನಲ್ಲಿ ಮರೆಯಾದ ಮಾಣಿಕ್ಯನ ಪರಿಸರ ಪ್ರೀತಿಗೆ ಇಂದಿನ ಗಂಧದಗುಡಿ ಹಬ್ಬದ ಮೂಲಕ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಗಂಧದಗುಡಿಯ ಕಂಪುಸೂಸಿ ಮರೆಯಾದ ದೊಡ್ಮನೆ ಹುಡುಗನ ಪ್ರೀತಿ ಹಸಿರಸಿರಿ ರೂಪದಲ್ಲಿ ಮತ್ತೊಮ್ಮೆ ಸಾಬೀತಾಯಿತು. ಗಂಧದ ಗುಡಿಯ ಅಂಗಳದಲ್ಲಿ ಚಿಣ್ಣರ ಚಿತ್ತಾರಗಳ ಮಧ್ಯೆ ಅಪ್ಪುವಿನ ಸ್ಮರಣೆ ಜೊತೆ ಮಕ್ಕಳ ಉತ್ಸಾಹ ಮುಗಿಲು ಮುಟ್ಟಿತ್ತು.ಅಕ್ಟೋಬರ್ 28ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದ್ದ, ಸಾಕ್ಷ್ಯಚಿತ್ರಕ್ಕೆ ಅಮೋಘವರ್ಷ ನಿರ್ದೇಶನ ಮಾಡಿದ್ದರು. ಈ ಕನಸಿನ ಪ್ರಾಜೆಕ್ಟ್ ಅನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್ ನಿರ್ಮಿಸಿದ್ದರು. ಈಗ ನೂರು ದಿನ ಪೂರೈಸಿದ ಟ್ವೀಟ್ ಮಾಡಿದ್ದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, 100 ದಿನಗಳನ್ನು ಪೂರೈಸಿದ ನಿಜವಾದ ನಾಯಕನ ಗಂಧದಗುಡಿ ಪಯಣ! ಎಂದು ಬರೆದುಕೊಂಡಿದ್ದರು.ಅಮೋಘವರ್ಷ ನಿರ್ದೇಶನದ 'ಗಂಧದ ಗುಡಿ' ಸಾಕ್ಷ್ಯಚಿತ್ರದ ರೈಟ್ಸ್ನನ್ನು ಅಮೆಜಾನ್ ಪ್ರೈಂನವರು ಖರೀದಿಸಿದೆ. ಆದರೆ ಸಿನಿಮಾ ತೆರೆಕಂಡು 100 ದಿನಗಳು ಕಳೆದರೂ ಚಿತ್ರದ ಒಟಿಟಿ ಪ್ರಸಾರ ಮಾತ್ರ ಇನ್ನೂ ಆಗಿಲ್ಲ. ಇತ್ತ ಚಿತ್ರಮಂದಿರದಲ್ಲಿ ನೋಡದ ಜನ ಒಟಿಟಿಯಲ್ಲಿ ಯಾವಾಗ ರಿಲೀಸ್ ಆಗುತ್ತದೆ ಎಂದು ಕಾಯುತ್ತಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಯಾವುದೇ ಮಾಹಿತಿ ನೀಡಿಲ್ಲ.