ಪ್ರತಿಷ್ಠೆಯ ಆಖಾಡದಲ್ಲಿ ಗೆದ್ದ ಡಿಕೆಶಿ, ಜಾರಕಿಹೊಳಿ: ಬಿಜಿಪಿ ಸೋಲಿನ ರಹಸ್ಯ ಬಿಚ್ಚಿಟ್ಟ ಲಖನ್

ಪ್ರತಿಷ್ಠೆಯ ಆಖಾಡದಲ್ಲಿ ಗೆದ್ದ ಡಿಕೆಶಿ, ಜಾರಕಿಹೊಳಿ: ಬಿಜಿಪಿ ಸೋಲಿನ ರಹಸ್ಯ ಬಿಚ್ಚಿಟ್ಟ ಲಖನ್

ಬೆಳಗಾವಿ, ಡಿ 15: ಕೆಲವೊಂದು ಚುನಾವಣೆಯ ಫಲಿತಾಂಶಗಳು ಪಕ್ಷವು ತನ್ನ ರಣತಂತ್ರವನ್ನು ಪುನರ್ ಪರಿಶೀಲಿಸುವಂತೆ ಮಾಡುತ್ತದೆ. ಏನೇ ಆದಾರೂ, ಸ್ಥಳೀಯ ನಾಯಕರನ್ನು ಕಡೆಗಣಿಸಿದರೆ ಅದರ ರಿಸಲ್ಟ್ ಪಕ್ಷಕ್ಕೆ ವ್ಯತಿರಿಕ್ತವಾಗಿ ಬರುತ್ತದೆ ಎನ್ನುವುದಕ್ಕೆ ಬೆಳಗಾವಿ ವಿಧಾನ ಪರಿಷತ್ ಚುನಾವಣೆಯಲ್ಲಿನ ಬಿಜೆಪಿಯ ಸೋಲು.

ಯಾಕೆಂದರೆ ಬಿಜೆಪಿಯ ಪ್ರಭಾವೀ ಶಾಸಕ, ಬೆಳಗಾವಿ ರಾಜಕೀಯದಲ್ಲಿ ತನ್ನದೇ ಛಾಪನ್ನು ಹೊಂದಿರುವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನದ ಆಕಾಂಕ್ಷಿ ಎನ್ನುವುದು ಒಂದು ಕಡೆ. ಇನ್ನೊಂದು ಕಡೆ, ಅವರ ಸಹೋದರ ಲಖನ್ ಜಾರಕಿಹೊಳಿ ಪರಿಷತ್ತಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಜಾರಕಿಹೊಳಿ ಕುಟುಂಬದ ಎರಡೂ ಬೇಡಿಕೆಯನ್ನು ಬಿಜೆಪಿ ಈಡೇರಿಸಲಿರಲಿಲ್ಲ. ಹಾಗಾಗಿ, ತಮ್ಮ ಶಕ್ತಿಯೇನು ಎನ್ನುವುದನ್ನು ಜಾರಕಿಹೊಳಿ ಸಹೋದರರು ದ್ವಿಸದಸ್ಯ ಸ್ಥಾನವನ್ನು ಹೊಂದಿದ್ದ ಬೆಳಗಾವಿ ವಿಧಾನ ಪರಿಷತ್ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಇದು ನಿರೀಕ್ಷಿತವಾಗಿತ್ತು ಕೂಡಾ..

ಒಂದು ಕಡೆ ಕಣದಲ್ಲಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬೆಂಬಲ. ಇನ್ನೊಂದು ಕಡೆ, ಪಕ್ಷೇತರ ಅಭ್ಯರ್ಥಿ ಲಖನ್ ಗೆ ಜಾರಕಿಹೊಳಿ ಕುಟುಂಬದ ಶ್ರೀರಕ್ಷೆಯಿಂದಾಗಿ, ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಸುಲಭದ ತುತ್ತಾಗಿ ಸೋತಿದ್ದಾರೆ.

ಬೆಳಗಾವಿ ದ್ವಿ-ಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚನ್ನರಾಜ ಬಸವರಾಜ ಹಟ್ಟಿಹೊಳಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಾಶಸ್ತ್ಯದ 3,715 ಮತಗಳನ್ನು ಪಡೆದು ಬಿಜೆಪಿಯ ಹಾಲಿ ಪರಿಷತ್ ಸದಸ್ಯರಾಗಿದ್ದ ಮಹಾಂತೇಶ ಕವಟಗಿಮಠರನ್ನು ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿದ್ದಾರೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲಿ 2,526 ಮತಗಳನ್ನು ಪಡೆದು 2ನೇ ಸ್ಥಾನ ಪಡೆದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. 2,454 ಮತಗಳನ್ನು ಪಡೆದ ಮಹಾಂತೇಶ ಕವಟಗಿಮಠ ಸೋಲು ಅನುಭವಿಸಿದ್ದಾರೆ. (ಚಿತ್ರದಲ್ಲಿ ಚನ್ನರಾಜ ಬಸವರಾಜ ಹಟ್ಟಿಹೊಳಿ) ಜಾರಕಿಹೊಳಿ ಕುಟುಂಬದ ಶ್ರೀರಕ್ಷೆ ಲಖನ್ ಗೆಲುವು.

ಡಿ.ಕೆ.ಶಿವಕುಮಾರ್ ಅವರ ಬೆಂಬಲದೊಂದಿಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ಗೆಲುವಿಗೆ ಅವಿರತ ಶ್ರಮವಹಿಸಿದ್ದರು. ಇನ್ನೊಂದು ಕಡೆ, ಸಹೋದರರಾದ ಬಾಲಚಂದ್ರ ಮತ್ತು ರಮೇಶ್ ಜಾರಕಿಹೊಳಿಯವರು ಲಖನ್ ಗೆಲುವಿಗೆ ಭರ್ಜರಿ ಕಾರ್ಯತಂತ್ರ ರೂಪಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಕೂಡಾ ಒಂದು ಕಾಂಗ್ರೆಸ್ ಇನ್ನೊಂದು ಸಹೋದರ ಗೆಲ್ಲುವಂತೆ ಮಾಡುವಲ್ಲಿ ಯೋಜನೆಯನ್ನು ಹಣೆದಿದ್ದರು. ಇವರೆಲ್ಲರ ಲೆಕ್ಕಾಚಾರ ವರ್ಕೌಟ್ ಆಗಿದ್ದರಿಂದ ಬಿಜೆಪಿ ಅಭ್ಯರ್ಥಿ ಸೋಲು ಅನುಭವಿಸುವಂತಾಯಿತು. ವಿಜೇತ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅಭಿಪ್ರಾಯ.

"ಲಿಂಗಾಯತ ಸಮುದಾಯದ ಮತಗಳು ಇಬ್ಬಾಗ ಆಗಿದ್ದರಿಂದ ಬಿಜೆಪಿಗೆ ಸೋಲಾಯಿತು. ಬಿಜೆಪಿ ಅಭ್ಯರ್ಥಿ ಮತ್ತು ಡಿ.ಕೆ.ಶಿವಕುಮಾರ್ ಅವರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡರು. ಇದರಿಂದ ಅವರಿಗೆ ಸೋಲಾಯಿತು. ಇದರಲ್ಲಿ ರಮೇಶ್ ಅಥವಾ ಬಾಲಚಂದ್ರ ಜಾರಕಿಹೊಳಿಯದ್ದು ಏನೂ ಪಾತ್ರವಿಲ್ಲ. ಕಾಂಗ್ರೆಸ್ಸಿನವರು ಜಾಸ್ತಿ ಮತ ಪಡೆದು ಬಿಜೆಪಿಯಿಂದ ಅನುಕೂಲ ಪಡೆದುಕೊಂಡರು"ಎಂದು ವಿಜೇತ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅಭಿಪ್ರಾಯ ಪಟ್ಟಿದ್ದಾರೆ. ಬಿಜೆಪಿಯವರು ಮಾಡಿದ್ದನ್ನು ಅನುಭವಿಸುತ್ತಿದ್ದಾರೆ, ಜನರೇನು ಮೂರ್ಖರಲ್ಲ. "ಬಿಜೆಪಿ, ನಾವು ಎರಡು ಮತ್ತು ಕಾಂಗ್ರೆಸ್ ಮೂರನೇ ಸ್ಥಾನದಲ್ಲಿ ಇದ್ದೆವು, ಆದರೆ, ಡಿ.ಕೆ.ಶಿವಕುಮಾರ್ ಅವರು ಫಿಕ್ಸಿಂಗ್ ಮಾಡಿಕೊಂಡರು. ಕೊನೇ ಗಳಿಗೆಯಲ್ಲಿ ಬಿಜೆಪಿ ಮತಗಳು ಕಾಂಗ್ರೆಸ್ಸಿಗೆ ಬಿದ್ದವು. ಬಿಜೆಪಿ ಸೋಲಿಗೆ ನನ್ನ ಸಹೋದರರು ಕಾರಣರಲ್ಲ, ಇದಕ್ಕೆ ನೇರ ಕಾರಣ ಡಿಕೆಶಿಯವರ ಫಿಕ್ಸಿಂಗ್. ಬಿಜೆಪಿಯವರು ಮಾಡಿದ್ದನ್ನು ಅನುಭವಿಸುತ್ತಿದ್ದಾರೆ, ಜನರೇನು ಮೂರ್ಖರಲ್ಲ. ಹದಿನೆಂಟು ಮತಕ್ಷೇತ್ರಗಳು ಬರುವುದರಿಂದ ಎಲ್ಲಾ ಕಡೆ ಸುತ್ತಾಡಿದ್ದೇನೆ, ಜನತೆಗೆ ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ" ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ.