ಶಿವಲಿಂಗೇಗೌಡರ ಪ್ರತಿಸ್ಪರ್ಧಿ ಯಾರು?
ಪರಿಸರವನ್ನೊಳಗೊಂಡಿರುವ ವಿಶಾಲವಾದದ್ದು ಅರಸೀಕೆರೆ ವಿಧಾನಸಭಾ ಕ್ಷೇತ್ರ. ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಅವರು ಸತತವಾಗಿ 3ನೇ ಬಾರಿ ಪ್ರತಿನಿಧಿಸುತ್ತಿರುವ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಚುನಾವಣೆಯ ಕಾವು ಆರಂಭವಾಗಿದೆ.
ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಜೆಡಿಎಸ್ ತ್ಯಜಿಸಿ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಜೆಡಿಎಸ್‌ಗೆ ಕ್ಷೇತ್ರದಲ್ಲಿ ಭದ್ರನೆಲೆಯನ್ನು ಕಲ್ಪಿಸಿದ್ದ ಶಿವಲಿಂಗೇಗೌಡ ಅವರು ಪಕ್ಷ ತ್ಯಜಿಸುತ್ತಿರುವುದರಿಂದ ಸಮರ್ಥ ಅಭ್ಯರ್ಥಿ ಗಳಿಗಾಗಿ ಹುಡುಕಾಡಬೇಕಾದ ಪರಿಸ್ಥಿತಿ ಜೆಡಿಎಸ್‌ನಲ್ಲಿದೆ. ಶಿವಲಿಂಗೇಗೌಡ ಅವರು ಹೊರ ಹೋದರೆ ಜಿಲ್ಲಾ ಪಂ. ಮಾಜಿ ಸದಸ್ಯ, ಕುರುಬ ಸಮುದಾಯದ ಯುವ ಮುಖಂಡ ಅಶೋಕ್ ಜೆಡಿಎಸ್ ಅಭ್ಯರ್ಥಿಯಾಗ ಬಹುದೆಂದು ಬಿಂಬಿಸಲಾಗುತ್ತಿದೆ. ಆದರೆ ಜೆಡಿಎಸ್ ವರಿಷ್ಠರು ಅಶೋಕ್ ಅಭ್ಯರ್ಥಿ ಎಂದು ಘೋಷಣೆ ಮಾಡಿಲ್ಲ. ಸಮರ್ಥ ಅಭ್ಯರ್ಥಿಗಾಗಿ ಕಾಯುತ್ತಿದ್ದಾರೆ. ಬೇರೆ ಪಕ್ಷಗಳಿಂದ ಪ್ರಭಾವಿಗಳು ಬಂದರೆ ಸ್ವಾಗತಿಸಿ ಸ್ಪರ್ಧಾ ಕಣಕ್ಕಿಳಿಸಲು ಜೆಡಿಎಸ್ ವರಿಷ್ಠರು ಸಜ್ಜಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಬಿರುಗಾಳಿಯಂತೆ ಸುತ್ತಾಡುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತಂಗಿಯ ಮೊಮ್ಮಗ ಎನ್. ಆರ್.ಸಂತೋಷ್ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಯಡಿ ಯೂರಪ್ಪ ಅವರು ಸಿಎಂ ಆಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿದ್ದ ಎನ್.ಆರ್.ಸಂತೋಷ್ ಅವರು ಯಡಿಯೂರಪ್ಪ ಅವರ ಕುಟುಂಬದವರ ಕೆಂಗಣ್ಣಿಗೆ ಗುರಿ ಯಾಗಿದ್ದಾರೆ ಎಂದು, ಅವರಿಗೆ ಬಿಜೆಪಿ ಟಿಕೆಟ್ ಸಿಗಲಾರದು ಎಂಬ ವದಂತಿ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಸಂತೋಷ್ ಅವರು ಈಗಾಗಲೇ ಜೆಡಿಎಸ್ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರೆ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಶಾಸಕ ಶಿವಲಿಂಗೇಗೌಡ ಅವರ ಎದುರು ಸ್ಪರ್ಧೆಗಿಳಿಯುವ ಅಚ್ಚರಿ ಬೆಳವಣಿಗೆ ಕ್ಷೇತ್ರದಲ್ಲಿ ನಡೆಯಲೂಬಹುದು ಎಂಬುದು ಅರಸೀಕೆರೆಯ ಸದ್ಯದ ರಾಜಕೀಯ ಚಿತ್ರಣ.
ಎನ್.ಆರ್.ಸಂತೋಷ್‌ಗೆ ಬಿಜೆಪಿ ಟಿಕೆಟ್ ಸಿಕ್ಕದರೆ ಶಿವಲಿಂಗೇಗೌಡ ಅವರೆದುರು ಸೆಣೆಸಬಲ್ಲ ಪ್ರಭಾವಿ ನಾಯಕ ರತ್ತ ಜೆಡಿಎಸ್ ಕಣ್ಣು ಹಾಯಿಸಿದೆ ಎಂದು ಹೇಳಲಾಗುತ್ತಿದೆ. ಬೇಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯಾಗಿರುವ ಮಾಜಿ ಸಚಿವ ಬಿ.ಶಿವರಾಮು ಅವರು ಇತ್ತೀಚೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ವಿರೋಧ ಎದುರಿಸುತ್ತಿದ್ದಾರೆ. ಅವರಿಗೆ ಬೇಲೂರಿನಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿದರೆ ಅರಸೀಕೆರೆ ಕ್ಷೇತ್ರದಲ್ಲಿ ಬಿ.ಶಿವರಾಮು ಅವರು ಜೆಡಿಎಸ್ ಅಭ್ಯರ್ಥಿಯಾಗಬಹುದು ಎಂಬ ಮತ್ತೂಂದು ವದಂತಿಯೂ ಹರಿದಾಡುತ್ತಿದೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜು, ಅಣ್ಣಾಯಕನಹಳ್ಳಿ ವಿಜಯ ಕುಮಾರ್ ಅವರೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಯಾಗಿದ್ದ ಬೆಂಗಳೂರು ಗ್ರಾಮಾಂತರ ಜಿ.ಪಂ. ಮಾಜಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮರಿಸ್ವಾಮಿ ಅವರೂ ಈ ಬಾರಿಯೂ ಅರಸೀಕೆರೆ ಕ್ಷೇತ್ರದಲ್ಲಿ ಸ್ಪರ್ಧಾಕಾಂಕ್ಷಿ. ಆದರೆ ಸಂತೋಷ್ ಶಿವಲಿಂಗೇಗೌಡರಿಗೆ ಸಮರ್ಥ ಎದುರಾಳಿ ಅನ್ನಿಸಿಕೊಂಡಿದ್ದರೂ ಇದು ಹೊರಗಿನವರು ಎಂಬ ಮಾತುಗಳೂ ಇವೆ.
– ಎನ್. ನಂಜುಂಡೇಗೌಡ