ಶಿವಮೊಗ್ಗ: ನೂತನ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿ ಸಾವು

ಶಿವಮೊಗ್ಗ: ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ನಗರದಲ್ಲಿ ನಿರ್ಮಿಸಿರುವಂತ ನೂತನ ಏರ್ಪೋರ್ಟ್ ಅನ್ನು ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮಕ್ಕೆ ಬಂದು, ವಾಪಾಸ್ಸು ಆಗುತ್ತಿದ್ದಂತ ವ್ಯಕ್ತಿಯೊಬ್ಬರು ದಿಢೀರ್ ಕುಸಿತಗೊಂಡು ಸಾವನ್ನಪ್ಪಿರೋ ಘಟನೆ ನಿನ್ನೆ ಸಂಜೆ ನಡೆದಿದೆ.
ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಮ್ಮನೂರು ಗ್ರಾಮದಿಂದ ಮಲ್ಲಿಕಾರ್ಜನಪ್ಪ (50) ಎಂಬುವರು ಆಗಮಿಸಿದ್ದರು. ಬೆಳಿಗ್ಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಬಸ್ ನಲ್ಲಿ ಆಗಮಿಸಿದ್ದರು.
ಏರ್ ಪೋರ್ಟ್ ಉದ್ಘಾಟನೆ ಕಾರ್ಯಕ್ರಮ ಮುಗಿಸಿ ವಾಪಾಸ್ಸು ತೆರಳುತ್ತಿದ್ದಾಗ ಸೋಗಾನೆ ಗ್ರಾಮದ ಕೆಇಬಿ ಸಮೀಪ ಅಸ್ವಸ್ಥಗೊಂಡಿದ್ದರು. ಅಲ್ಲದೇ ಅಲ್ಲಿಯೇ ಕುಸಿದು ಬಿದ್ದು, ಮೃತಪಟ್ಟಿರೋದಾಗಿ ತಿಳಿದು ಬಂದಿದೆ. ಅವರ ಸಾವಿಗೆ ಖಚಿತ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.