ಶಕೀಬ್ ಅಲ್ ಹಸನ್ ಬದಲಾಗಿ ಕೆಕೆಆರ್ ತಂಡಕ್ಕೆ ಸೇರಬಹುದಾದ ಆಟಗಾರರು ಇವರು!
ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಈ ಬಾರಿಯ ಐಪಿಎಲ್ನಲ್ಲಿ ಯಾವುದು ಅಂದುಕೊಂಡಂತಾಗುತ್ತಿಲ್ಲ. ಪಂದ್ಯಾವಳಿ ಆರಂಭಕ್ಕೆ ಮುನ್ನವೇ ತಂಡದ ನಾಯಕ ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದ ಹೊರಗುಳಿದರು. ತಂಡದ ಪ್ರಮುಖ ವೇಗದ ಬೌಲರ್ ಲಾಕಿ ಫರ್ಗ್ಯುಸನ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಬಾಂಗ್ಲಾದೇಶದ ಸ್ಫೋಟಕ ಬ್ಯಾಟರ್ ಲಿಟ್ಟನ್ ದಾಸ್ ಕೂಡ ಕೆಕೆಆರ್ ತಂಡದಲ್ಲಿದ್ದು, ಅವರು ಕೂಡ ಏಪ್ರಿಲ್ 8 ರ ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಐಪಿಎಲ್ನ ತಮ್ಮ ಮೊದಲನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 7 ರನ್ಗಳಿಂದ ಸೋಲನುಭವಿಸಿದೆ. ಏಪ್ರಿಲ್ 6ರಂದು ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.
ಶಕೀಬ್ ಅಲ್ ಹಸನ್ ಐಪಿಎಲ್ ಟೂರ್ನಿಯಲ್ಲಿ ಸಂಪೂರ್ಣವಾಗಿ ಆಡಲು ನಿರ್ಧರಿಸಿದ್ದರು, ಆದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅವರಿಗೆ ನಿರಾಕ್ಷೇಪಣಾ ಪತ್ರವನ್ನು ನೀಡಲಿಲ್ಲ. ಇದರಿಂದ ಫ್ರಾಂಚೈಸಿ ಜೊತೆ ಚರ್ಚೆ ನಡೆಸಿದ ಬಳಿಕ, ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದರು. ಈ ಮೂಲಕ ಕೆಕೆಆರ್ 1.5 ಕೋಟಿ ರುಪಾಯಿ ಪರ್ಸ್ ಹೊಂದಿದ್ದು, ಬದಲೀ ಆಟಗಾರರನ್ನು ಸೇರ್ಪಡೆ ಮಾಡಿಕೊಳ್ಳಬಹುದು. ಶಕೀಬ್ ಬದಲಾಗಿ ಈ ಮೂವರಲ್ಲಿ ಒಬ್ಬರು ತಂಡಕ್ಕೆ ಸೇರ್ಪಡೆಯಾದರೆ ಉತ್ತಮ ಆಯ್ಕೆಯಾಗಲಿದ್ದಾರೆ.
ಶ್ರೀಲಂಕಾ ನಾಯಕ ದಸುನ್ ಶನಕ
ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಶಕೀಬ್ ಬದಲಾಗಿ ತಂಡವನ್ನು ಸೇರಿಕೊಳ್ಳಲು ಉತ್ತಮ ಆಯ್ಕೆಯಾಗಿದ್ದಾರೆ. ಭಾರತದ ಪ್ರವಾಸದ ಸಂದರ್ಭದಲ್ಲಿ ಶನಕ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಭಾರತದ ಪರಿಸ್ಥಿತಿಗಳಲ್ಲಿ ಅವರಿಗೆ ಆಡಿದ ಅನುಭವ ಇರುವುದರಿಂದ ಪರಿಣಾಮಕಾರಿ ಪ್ರದರ್ಶನ ನೀಡಬಲ್ಲರು. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ತಂಡಕ್ಕೆ ಕೊಡುಗೆ ನೀಡುತ್ತಾರೆ.
ಶನಕ ನಾಯಕತ್ವದಲ್ಲೇ ಶ್ರೀಲಂಕಾ ತಂಡ ಕಳೆದ ವರ್ಷ ಏಷ್ಯಾಕಪ್ ಚಾಂಪಿಯನ್ ಆಗಿದ್ದರು. ನಾಯಕತ್ವದ ವಿಚಾರದಲ್ಲಿ ಕೂಡ ಅವರು ತಂಡಕ್ಕೆ ಸೂಕ್ತ ಸಲಹೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಆಂಡ್ರೆ ರಸೆಲ್ ಜೊತೆ ಮಧ್ಯಮ ಅಥವಾ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಮೂಲಕ ಫಿನಿಶರ್ ಪಾತ್ರವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ. ಸದ್ಯ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿದ್ದು, ಏಪ್ರಿಲ್ 8ರ ನಂತರ ಆಯ್ಕೆಗೆ ಲಭ್ಯವಿರುತ್ತಾರೆ.
ನ್ಯೂಜಿಲೆಂಡ್ ಆಲ್ರೌಂಡರ್ ಆಡಂ ಮಿಲ್ನೆ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕೆಲವು ಪ್ರತಿಭಾವಂತ ಆಲ್ರೌಂಡರ್ಗಳು ಇದ್ದಾರೆ, ಅದಕ್ಕಾಗಿಯೇ ಅವರು ಶಕೀಬ್ನ ಬದಲಿಯಾಗಿ ವೇಗದ ಬೌಲರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಕೂಡ ಇದೆ. ಪಂಜಾಬ್ ವಿರುದ್ಧದ ಮೊದಲನೇ ಪಂದ್ಯದಲ್ಲಿ ಉಮೇಶ್ ಯಾದವ್, ಟಿಮ್ ಸೌಥಿ ಮತ್ತು ಶಾರ್ದೂಲ್ ಠಾಕೂರ್ ಆಡಿದ್ದರು.
ಕೋಲ್ಕತ್ತಾ ತಂಡದ ಪ್ರಮುಖ ವೇಗದ ಬೌಲರ್ ಲಾಕಿ ಫರ್ಗುಸನ್ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ಧಾರೆ. ಸದ್ಯ ಚೇತರಿಸಿಕೊಳ್ಳುತ್ತಿರುವ ಅವರು, ಯಾವಾಗ ಫಿಟ್ ಆಗುತ್ತಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅವರಿಗೆ ಪರ್ಯಾಯ ವೇಗದ ಬೌಲರ್ ಬೇಕೆಂದು ಫ್ರಾಂಚೈಸಿ ಬಯಸಿದರೆ, ಆಡಂ ಮಿಲ್ನೆ ಉತ್ತಮ ಆಯ್ಕೆಯಾಗಲಿದ್ದಾರೆ.
ಆಲ್ರೌಂಡರ್ ಮೊಹಮ್ಮದ್ ನಬಿ
ಅಫ್ಘಾನಿಸ್ತಾನದ ಅನುಭವಿ ಆಲ್ರೌಂಡರ್ ಮೊಹಮ್ಮದ್ ನಬಿ ಕಳೆದ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದರೂ, ಆಡಲು ಅವಕಾಶ ಸಿಕ್ಕಿರಲಿಲ್ಲ. ನಬಿ ಟಿ20 ಕ್ರಿಕೆಟ್ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಆಟಗಾರ. ವಿಶ್ವದ ವಿವಿಧ ಟಿ20 ಲೀಗ್ಗಳಲ್ಲಿ ಆಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ ಮೊದಲ ಬಾರಿಗೆ ಟಿ20 ಸರಣಿ ಗೆಲ್ಲುವಲ್ಲಿ ನಬಿ ಮುಖ್ಯಪಾತ್ರ ವಹಿಸಿದ್ದರು.
ಮೊಹಮ್ಮದ್ ನಬಿ ಶಕೀಬ್ ಅವರಂತೆಯೇ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಆಟಗಾರು. ಮಾತ್ರವಲ್ಲದೆ ಸ್ಪಿನ್ ಬೌಲರ್ ಕೂಡ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ವರ್ಷ ಅವರನ್ನು ಸರಿಯಾಗಿ ಉಪಯೋಗಿಸಿಕೊಳ್ಳದ ಕಾರಣ, ಮಿನಿ ಹರಾಜಿಗೆ ಮುನ್ನ ಬಿಡುಗಡೆ ಮಾಡಿದ್ದರು. ಈಗ ಮತ್ತೆ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.