ರೈತರ ಭೂಮಿಯಲ್ಲೇ ನಿವೇಶನ ಹಂಚಿಕೆ - BDA ಅಧ್ಯಕ್ಷ ಎಸ್.ಆರ್.ವಿಶ್ವನಾಥ್

ರೈತರ ಭೂಮಿಯಲ್ಲೇ ನಿವೇಶನ ಹಂಚಿಕೆ - BDA ಅಧ್ಯಕ್ಷ ಎಸ್.ಆರ್.ವಿಶ್ವನಾಥ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಸುಮಾರ 11 ಸಾವಿರ ಎಕರೆ ಜಾಗಗಳ ವ್ಯಾಜ್ಯ ವಿಲೇವಾರಿಗೆ ನ್ಯಾಯಾಲಯದಿಂದಲೇ ಅದಾಲತ್ ನಡೆಸುವಂತೆ ಬಿಡಿಎ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್, ವಿವಿಧ ಬಡಾವಣೆಗಳ ನಿರ್ಮಾಣಕ್ಕಾಗಿ ಬಿಡಿಎ ಕಾಲಕಾಲಕ್ಕೆ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು.

ಆದರೆ, ಭೂ ಪರಿಹಾರ ಕಡಿಮೆ ಆಗಿದೆ ಎಂಬುದು ಸೇರಿದಂತೆ ಹಲವು ಕಾರಣಗಳಿಂದ ಭೂಮಾಲೀಕರು ಬಿಡಿಎ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ದಾವೆ ಹೂಡಿದ್ದಾರೆ. ಕೆಲವು ಪ್ರಕರಣಗಳು 30-40 ವರ್ಷಗಳಾದರೂ ಇತ್ಯರ್ಥವಾಗದೇ ಉಳಿದಿವೆ ಎಂದರು.

ಇದರಿಂದ ಭೂಸ್ವಾಧೀನ ಪ್ರಕ್ರಿಯೆಗೆ ಹಿನ್ನಡೆ ಮತ್ತು ಭೂಮಾಲೀಕರಿಗೆ ಪರಿಹಾರ ಸಿಗುವಲ್ಲಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಮತ್ತು ಭೂಮಾಲೀಕರಿಗೆ ಅನುಕೂಲವಾಗುವ ರೀತಿಯಲ್ಲಿ ಬಾಕಿ ಉಳಿದಿರುವ ಸುಮಾರು 11 ಸಾವಿರ ಎಕರೆ ಭೂ ವ್ಯಾಜ್ಯಗಳನ್ನು ವಿಶೇಷ ಅದಾಲತ್ತುಗಳನ್ನು ನ್ಯಾಯಾಲಯದಿಂದಲೇ ನಡೆಸಿ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗೆ ಇತ್ಯರ್ಥವಾಗುವ ಪ್ರಕರಣಗಳಿಂದ ಬಿಡಿಎಗೆ ಆದಾಯ ಬರಲಿದೆ ಎಂದು ತಿಳಿಸಿದರು.

ಬಿಡಿಎ ಅಧ್ಯಕ್ಷರಾಗಿ ಎರಡು ವರ್ಷ ನಾಲ್ಕು ತಿಂಗಳ ಅಧಿಕಾರಾವಧಿಯಲ್ಲಿ ಸಂಸ್ಥೆಯ ಬೆಳವಣಿಗೆಗೆ ಪೂರಕವಾದ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇನೆ. ಅಧಿಕಾರ ವಹಿಸಿಕೊಂಡ ತಕ್ಷಣ ಕೆಲವರ ವಿರೋಧದ ನಡುವೆಯೇ ಮಧ್ಯವರ್ತಿಗಳು ಮತ್ತು ಏಜೆಂಟರ ಹಾವಳಿಗೆ ಕಡಿವಾಣ ಹಾಕುವ ಕೆಲಸ ಮಾಡಿದ್ದೇನೆ ಎಂದರು.

ಇದರ ಜೊತೆಗೆ ಏಜೆಂಟರ ಜೊತೆಗೆ ಶಾಮೀಲಾಗಿ ಸಂಸ್ಥೆಗೆ ನಷ್ಟ ಮಾಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ರೈತರ ಜಾಗದಲ್ಲಿ ನಿವೇಶನ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡುವ ರೈತರಿಗೆ ಅವರದೇ ಜಮೀನಿನಲ್ಲಿ ಶೇ.40ರಂತೆ ಪರಿಹಾರಾರ್ಥ ನಿವೇಶನದ ಜಾಗವನ್ನು ಮೀಸಲಿಡಲಾಗುವುದು. ರೈತರು ತಮ್ಮದಾಗಿಸಿಕೊಳ್ಳಲು ಒಂದು ವರ್ಷ ಕಾಲಾವಕಾಶ ನೀಡಲಾಗುವುದು. ಈ ಸಂಬಂಧ ಹಂಚಿಕೆಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ತಿಳಿಸಿದರು.

ನನ್ನದೇ ಕ್ಷೇತ್ರವಾದ ಶಿವರಾಮ ಕಾರಂತ ಬಡಾವಣೆಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ನಿಲುವು ಕೈಗೊಳ್ಳಲಾಗಿದೆ. ರೈತರಿಗೆ ತಮ್ಮ ಭೂಮಿಯಲ್ಲೇ ಪರಿಹಾರ ನಿವೇಶನದ ಜಾಗವನ್ನು ಮೀಸಲಿಟ್ಟು ಅದರ ನೋಂದಣಿಗಾಗಿ ಒಂದು ವರ್ಷ ಕಾಲ ಸಮಯ ನೀಡಲಾಗುವುದು. ತಮ್ಮ ಜಮೀನಿನ ಬಗ್ಗೆ ಭಾವನಾತ್ಮಕ ಸಂಬಂಧಗಳಿರುತ್ತವೆ. ಹೀಗಾಗಿ ಅವರದೇ ಭೂಮಿಯಲ್ಲಿ ನೀಡಲಾಗುವುದು ಎಂದರು.

ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬಿಡಿಎ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಆರ್ಥಿಕ ಸ್ವಾವಲಂಬನೆ ಸಾಧಿಸಿದೆ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣದಿಂದ ಪ್ರಾಧಿಕಾರ ಖಾತೆಯಲ್ಲಿ 1,012 ಕೋಟಿ ರೂ. ಹಣವಿದೆ. 2020ರ ನವೆಂಬರ್ ತಿಂಗಳಲ್ಲಿ ಬಿಡಿಎ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ಬಿಡಿಎ ಖಾತೆಯಲ್ಲಿ ಇದ್ದದ್ದು ಕೇವಲ 260.20 ಕೋಟಿ ರೂ. ಮಾತ್ರ. ಆದರೆ, ಆರ್ಥಿಕ ಸಂಪನ್ಮೂಲ ಕ್ರೋಢೀಕರಣ, ಮಧ್ಯಂತರ ನಿವೇಶನಗಳ ಹರಾಜು, ಭೂ ಕಬಳಿಕೆದಾರರಿಂದ ವಶಪಡಿಸಿಕೊಳ್ಳಲಾದ ಪ್ರಾಧಿಕಾರದ ಆಸ್ತಿಗಳನ್ನು ಹರಾಜಿನಲ್ಲಿ ಹಂಚಿಕೆ ಮಾಡಿದ್ದರಿಂದ ಪ್ರಸ್ತುತ ಪ್ರಾಧಿಕಾರವು ಆರ್ಥಿಕವಾಗಿ ಸಮೃದ್ಧವಾಗಿದೆ ಎಂದರು. ಹಳೆಯ ಲೇಔಟ್ಗಳ ಮೂಲ ಸೌಲಭ್ಯಗಳ ಅಭಿವೃದ್ಧಿಗೂ ಬಿಡಿಎ ಇದೀಗ ಒತ್ತು ನೀಡಿದ್ದು, ಅಭಿವೃದ್ಧಿ ಕೆಲಸಗಳ ಮುಗಿದ ಕೂಡಲೇ ಹಳೆಯ ಬಡಾವಣೆಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗುವುದು. ಈ ಸಂಬಂಧ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

2 ಸಾವಿರ ಕೋಟಿ ಮೌಲ್ಯ ಆಸ್ತಿಗಳು ವಶ

ಬಿಡಿಎ ವ್ಯಾಪ್ತಿಯ ಲೇಔಟ್ಗಳಲ್ಲಿ 2020 ರ ಡಿಸೆಂಬರ್ 1 ರಿಂದ ಇಲ್ಲಿಯವರೆಗೆ 2 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಬಿಡಿಎ ಆಸ್ತಿಯನ್ನು ಭೂಕಬಳಿಕೆದಾರರಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ಬಿಡಿಎಯಿಂದ ವಿವಿದ ಬಡಾವಣೆಗಳಲ್ಲಿ ಒಟ್ಟು 3735 ನಿವೇಶನಗಳನ್ನು ಹರಾಜು ಮೂಲಕ ಸಾರ್ವಜನಿಕರಿಗೆ ಹಂಚಿಕೆ ಮಾಡಿದ್ದು ಇದರಿಂದ ಪ್ರಾಧಿಕಾರದ ಬೊಕ್ಕಸಕ್ಕೆ 3553 ಕೋಟಿ ರೂ. ಆದಾಯ ಬಂದಿದೆ.

ಪೆರಿಪೆರಲ್ ರಿಂಗ್ ರಸ್ತೆ ಆಗದ್ದು ಬೇಸರ

ಆದರೆ ನನ್ನ ಅವಧಿಯಲ್ಲಿ ಪೆರಿಫೆರಲ್ ರಿಂಗ್ರಸ್ತೆಯನ್ನು ಮಾಡಲಾಗಲಿಲ್ಲ ಎಂಬ ಬೇಸರ ನನ್ನಲ್ಲಿದೆ. ಈ ಹಿಂದೆ ನಿಗದಿಪಡಿಸಿದ ದರಕ್ಕೆ ಅನುಗುಣವಾಗಿ ನಿರ್ಮಾಣ ನಡೆಯಬೇಕೆಂಬ ಷರತ್ತು ಇದ್ದುದರಿಂದ ಆ ಕಾರ್ಯ ಸಾಧ್ಯವಾಗಲಿಲ್ಲ ಎಂದು ಇದೇ ವೇಳೆ ಹೇಳಿದರು.

ಅಂಜನಾಪುರ, ಮುಂದುವರಿದ ಅಂಜನಾಪುರ ಬಡಾವಣೆ, ಬನಶಂಕರಿ 6ನೇ ಹಂತ, ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಗಳು ಸೇರಿದಂತೆ ನಾನಾ ಬಡಾವಣೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕರಗ ಮಂಟಪದ ಜೀರ್ಣೋದ್ಧಾರಕ್ಕೆ 6.30 ಕೋಟಿ ರೂ. ಬಿಡುಗಡೆ ಮಾಡಲಾಗಿದ ಎಂದು ತಿಳಿಸಿದರು.

ಬಿಡಿಎ ಫ್ಲ್ಯಾಟ್ಗಳಿಗೆ ಶೇ.10 ರಿಯಾಯಿತಿ

ಕಣಿಮಿಣಿಕೆಯಲ್ಲಿ ಮಾರಾಟವಾಗದೆ ಉಳಿದಿರುವ ಫ್ಲ್ಯಾಟ್ ಗಳಿಗೆ ಶೇ.10ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಜೂ.30ರವರೆಗೆ ಈ ರಿಯಾಯಿತಿ ಮುಂದುವರಿಯಲಿದೆ ಎಂದು ಬಿಡಿಎ ಅಧ್ಯಕ್ಷರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಡಿಎ ಅಭಿಯಂತರ ಸದಸ್ಯ ಶಾಂತರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.