ಮಂಡ್ಯ: 'ಮದ್ದೂರು ಪುರಸಭೆ ಬಜೆಟ್' ಮಂಡಿಸಿದ 'ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್'

ಮಂಡ್ಯ: 'ಮದ್ದೂರು ಪುರಸಭೆ ಬಜೆಟ್' ಮಂಡಿಸಿದ 'ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್'

ಮಂಡ್ಯ : ಮದ್ದೂರು ಪಟ್ಟಣದ ಪುರಸಭೆಯ 2023-24 ನೇ ಸಾಲಿನ ಒಟ್ಟು 50 ಲಕ್ಷ ರೂಗಳ ಉಳಿತಾಯ ಬಜೆಟ್ ಅನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್ ಮಂಗಳವಾರ ಮಂಡಿಸಿದರು.

ಮದ್ದೂರು ಪಟ್ಟಣದ ಪುರಸಭೆಯ ಎಸ್.ಎಂ ಕೃಷ್ಣ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷ ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಿಗದಿಯಾದ ಆಯ-ವ್ಯಯ ಸಭೆಯು ಆರಂಭವಾಗುತ್ತಿದ್ದಂತೆಯೇ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಪ್ರಸ್ತುತ ಸಾಲಿನ ಬಜೆಟ್ ವಿವರವನ್ನು ಸಭೆಯಲ್ಲಿ ಓದಿದರು.

ಪ್ರಮುಖ ಆದಾಯವಾಗಿ ಆಸ್ತಿ ತೆರಿಗೆ ಹಾಗೂ ದಂಡ ಪಾವತಿಯಿಂದ 3.30 ಕೋಟಿ ರೂ, ಮಳಿಗೆಗಳ ಬಾಡಿಗೆಗಳಿಂದ 17.50 ಲಕ್ಷ ರೂ, ಕಟ್ಟಡ ಪರವಾನಗಿ ಶುಲ್ಕದಿಂದ 6.50ಲಕ್ಷ ರೂ, ಉದ್ದಿಮೆ ಪರವಾನಗಿ ಶುಲ್ಕ 15 ಲಕ್ಷ ರೂ, ನೀರಿನ ಹಾಗೂ ಒಳಚರಂಡಿ ಸಂಪರ್ಕಗಳ ಶುಲ್ಕಗಳ ಠೇವಣಿ 1.02 ಕೋಟಿ ಸೇರಿದಂತೆ ಇತರೆಗಳಿಂದ ಒಟ್ಟು ಹಾಗೂ ರಾಜ್ಯ ಮತ್ತು ಕೇಂದ್ರಗಳಿಂದ ಬರುವ ಎಸ್.ಎಫ್.ಸಿ ಮುಕ್ತ ನಿಧಿಯಿಂದ 55 ಲಕ್ಷ, ಎಸ್. ಎಫ್. ಸಿ ವೇತನ ಅನುದಾನ, ಎಸ್, ಎಫ್. ಸಿ ವಿದ್ಯುತ್ ಅನುದಾನ ಸೇರಿದಂತೆ ಇತರ ಅನುದಾನಗಳಿಂದ ಒಟ್ಟಾರೆ 31.96 ಕೋಟಿ ರೂಗಳ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ ಎಂದರು.

ಅದರಂತೆ ಪ್ರಮುಖ ವೆಚ್ಚಗಳಾಗಿ ಕಟ್ಟಡ ನಿರ್ಮಾಣಕ್ಕೆ 30 ಲಕ್ಷ, ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ ರೂ, ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ 2.75 ಕೋಟಿ ರೂ, ಬೀದಿ ದೀಪ ಕಾಮಗಾರಿಗೆ 25 ಲಕ್ಷ, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕಾಗಿ 15 ಲಕ್ಷ, ಸ್ಮಶಾನ ಅಭಿವೃದ್ಧಿಗೆ 30 ಲಕ್ಷ, ನೈರ್ಮಲ್ಯ ವಾಹನ ಖರೀದಿಗಾಗಿ 55 ಲಕ್ಷ ಸೇರಿದಂತೆ ಹಲವು ವೆಚ್ಚವಾಗಿ 31.46 ಕೋಟಿ ನಿರೀಕ್ಷೆ ಮಾಡಿ ಅದರಂತೆ ಅಂತಿಮವಾಗಿ ಒಟ್ಟು 50 ಲಕ್ಷ ರೂ ಗಳನ್ನು ಉಳಿತಾಯ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪುರಸಭಾಧ್ಯಕ್ಷ ಸುರೇಶ್ ಕುಮಾರ್, ಉಪಾಧ್ಯಕ್ಷೆ ಸುಮಿತ್ರಾ, ಮುಖ್ಯ್ಯಾಧಿಕಾರಿ ಅಶೋಕ್ ಸೇರಿದಂತೆ ಅಧಿಕಾರಿಗಳು ಹಾಗೂ ಸದಸ್ಯರು ಇದ್ದರು.

ವರದಿ : ಗಿರೀಶ್ ರಾಜ್ ಮಂಡ್ಯ