ರಿಕ್ಷಾವಾಲನಿಗೆ ಒಂದು ಕೋಟಿ ಮೊತ್ತದ ಆಸ್ತಿ ದಾನ ನೀಡಿದ ಮಹಿಳೆ

ರಿಕ್ಷಾವಾಲನಿಗೆ ಒಂದು ಕೋಟಿ ಮೊತ್ತದ ಆಸ್ತಿ ದಾನ ನೀಡಿದ ಮಹಿಳೆ

ಭುವನೇಶ್ವರ್,ನ.15-ತಮ್ಮ ಕುಟುಂಬಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ರಿಕ್ಷಾ ಎಳೆಯುವ ಬಡ ವ್ಯಕ್ತಿಯ ಕುಟುಂಬಕ್ಕೆ ಹಿರಿಯ ಮಹಿಳೆಯೊಬ್ಬಳು ಒಂದು ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸ್ಥಿರಾಸ್ತಿಗಳನ್ನು ಕೊಡುಗೆ ನೀಡಿದ್ದಾರೆ.

ಒಡಿಶಾದ ಕಟಕ್‍ನಲ್ಲಿ ವಾಸಿಸುತ್ತಿದ್ದ ಮಿನತಿ ಪಟ್ನಾಯಕ್ (63) ಅವರು ತಮ್ಮ ಮೂರು ಮಹಡಿಗಳ ಮನೆ, ಚಿನ್ನಾಭರಣ ಸೇರಿದಂತೆ ಎಲ್ಲ ಆಸ್ತಿಗಳನ್ನು ರಿಕ್ಷಾ ಎಳೆಯುವ ಬುದ್ದ ಸಮನ್ ಅವರ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.

ಬುದ್ದ ಮತ್ತು ಅವನ ಕುಟುಂಬ ಕಳೆದ 25 ವರ್ಷಗಳಿಂದ ಮಿನತಿ ಪಟ್ನಾಯಕ್ ಅವರ ಕುಟುಂಬಕ್ಕೆ ಸೇವೆ ಸಲ್ಲಿಸುತ್ತಿತ್ತು. ಕಳೆದ ವರ್ಷ ಮಿನತಿ ಅವರ ಪತಿ ಮೂತ್ರಪಿಂಡ ವೈಫಲ್ಯದಿಂದ ನಿಧನರಾಗಿದ್ದರು. ಇತ್ತೀಚೆಗೆ ಅವರ ಮಗಳು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕುಟುಂಬದ ಸದಸ್ಯರನ್ನು ಕಳೆದುಕೊಂಡು ಒಂಟಿಯಾಗಿದ್ದ ವೇಳೆ ಬುದ್ದ ಅವರ ಕುಟುಂಬ ಮಹಿಳೆಯ ಜೊತೆ ನೈತಿಕ ಬೆಂಬಲವಾಗಿ ನಿಂತಿತ್ತು ಎಂದು ಹೇಳಲಾಗಿದೆ.ಆಸ್ತಿ ದಾನ ಮಾಡಿದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಮಿನತಿ ಅವರು, ಬುದ್ದ ಅವರ ತಮ್ಮ ಮಗಳನ್ನು ರಿಕ್ಷಾದಲ್ಲಿ ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ಇಡೀ ಕುಟುಂಬ 25 ವರ್ಷದಿಂದ ನಮ್ಮ ಮನೆಗೆ ಸೇವೆ ಮಾಡಿದೆ.

ಇತ್ತೀಚೆಗೆ ನನ್ನ ಸಂಕಷ್ಟದ ದಿನಗಳಲ್ಲಿ ನಮ್ಮ ಬಂಧುಬಳಗದ ಯಾರೂ ಕೂಡ ಸಹಾಯಕ್ಕೆ ಬರಲಿಲ್ಲ. ಒಂಟಿತನದಿಂದ ಹತಾಶರಾಗಿದ್ದಾಗ ಬುದ್ದ ಅವರ ಕುಟುಂಬ ನನ್ನ ಜೊತೆಗೆ ನಿಂತಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡಿದೆ. ಅದನ್ನು ಪರಿಗಣಿಸಿ ನನ್ನೆಲ್ಲ ಆಸ್ತಿಗಳನ್ನು ಅವರಿಗೆ ಉಡುಗೊರೆ ನೀಡಿದ್ದೇನೆ.

ನನ್ನ ಸಾವಿನ ಬಳಿಕ ಯಾರೂ ಅವರಿಗೆ ತೊಂದರೆ ಕೊಡಬೇಡಿ. ನನ್ನ ಕುಟುಂಬದ ಸದಸ್ಯರಿಗೆ ಸಾಕಷ್ಟು ಆಸ್ತಿ, ಹಣ ಇದೆ. ಅವರಿಗೆ ನಮ್ಮ ಆಸ್ತಿಯ ಅಗತ್ಯವಿಲ್ಲ ಎಂದಿದ್ದಾರೆ.ಆದರೆ ಮಿನತಿ ಅವರ ಈ ನಿರ್ಧಾರವನ್ನು ಆಕೆಯ ಸಹೋದರಿಯರು ವಿರೋಸಿದ್ದಾರೆ. ಬುದ್ದ ಅವರ ಕುಟುಂಬ ಇವರನ್ನು ಮರಳು ಮಾಡಿ ಆಸ್ತಿಯನ್ನು ಕಬಳಿಸುತ್ತಿದೆ ಎಂದು ದೂರಿದ್ದಾರೆ.

ಆದರೆ ಆರೋಪವನ್ನು ತಳ್ಳಿ ಹಾಕಿರುವ ಬುದ್ದ ಅವರ ಪತ್ನಿ, ಮಿನತಿ ಅವರನ್ನು ನಾವು ನನ್ನ ತಾಯಿ ಎಂದು ಭಾವಿಸಿದ್ದೇನೆ. ಆಕೆಯ ಕೊನೆ ಉಸಿರುರುವರೆಗೂ ನಾನು ಸೇವೆಯನ್ನು ಮಾಡುತ್ತೇನೆ ಎಂದಿದ್ದಾರೆ.