ರಾಜಕೀಯ ಎಂಟ್ರಿ' ಕುರಿತು ಮೌನ ಮುರಿದ ನಟ 'ಸುದೀಪ್' ಹೇಳಿದ್ದೇನು..?

ರಾಜಕೀಯ ಎಂಟ್ರಿ' ಕುರಿತು ಮೌನ ಮುರಿದ ನಟ 'ಸುದೀಪ್' ಹೇಳಿದ್ದೇನು..?

ಬೆಂಗಳೂರು : ನಟ ಕಿಚ್ಚ ಸುದೀಪ್ ರಾಜ್ಯ ರಾಜಕೀಯ ಎಂಟ್ರಿ ಕುರಿತು ಅಭಿಮಾನಿಗಳಲ್ಲಿ ಬಹಳ ಕುತೂಹಲ ಮೂಡಿದೆ. ನಟ ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಗುಸುಗುಸು ಇತ್ತೀಚೆಗೆ ಕೇಳಿಬಂದಿತ್ತು.

ಇದಕ್ಕೆ ನಟ ಕಿಚ್ಚ ಸುದೀಪ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ರಾಜಕೀಯ ನಾಯಕರು ಮಾತುಕತೆಗೆ ಬಂದಿದ್ದು ನಿಜ. ಆದರೆ ರಾಜಕೀಯಕ್ಕೆ ಪ್ರವೇಶ ನೀಡಬೇಕೋ ಬೇಡವೋ ಎಂಬ ಬಗ್ಗೆ ತಾವು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.ಇತ್ತೀಚೆಗೆ ರಾಜಕೀಯ ನಾಯಕರಿಗೆ ನಂಬಿಕೆ ಬಂದಿದೆ. ಡಿಕೆ ಶಿವಕುಮಾರ್, ಸುಧಾಕರ್, CM ಬೊಮ್ಮಾಯಿ, ರಮ್ಯಾ ನನ್ನ ಸ್ನೇಹಿತರು. ಎರಡೂ ಕಡೆ ಆಪ್ತರೇ ಇರುವಾಗ ನಿರ್ಧಾರ ತೆಗೆದುಕೊಳ್ಳುವುದು ಬಹಳ ಕಷ್ಟ, ನಾನು ಇನ್ನೂ ನಿರ್ಧಾರ ತಗೊಂಡಿಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರನ್ನು ನಟ ಕಿಚ್ಚ ಸುದೀಪ್ ಭೇಟಿಯಾಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಖಾಸಗಿ ಹೋಟೆಲ್ ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಕಿಚ್ಚ ಸುದೀಪ್ ಮಾತುಕತೆ ನಡೆಸಿದ್ದು, ಜೊತೆಗೆ ಒಟ್ಟಿಗೆ ಊಟ ಮಾಡಿದ್ದಾರೆ, ಈ ವೇಳೆ ಚುನಾವಣಾ ಪ್ರಚಾರ ಸಭೆಗಳಿಗೆ ಬರುವಂತೆ ಕಿಚ್ಚ ಸುದೀಪ್ ಗೆ ಡಿ.ಕೆ. ಶಿವಕುಮಾರ್ ಆಹ್ವಾನಿಸಿದ್ದಾರೆ ಎನ್ನಲಾಗಿತ್ತು.

ಉತ್ತರ ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯ ಬೃಹತ್ ಸಂಖ್ಯೆಯಲ್ಲಿದ್ದು, ಬಿಜೆಪಿಯಲ್ಲಿ ವಾಲ್ಮೀಕಿ ಸಮುದಾಯದಿಂದ ಶ್ರೀರಾಮುಲು ಮುಂಚೂಣಿಯಲ್ಲಿದ್ದಾರೆ. ಇತ್ತೀಚಿಗೆ ಮೀಸಲಾತಿ ಪ್ರಮಾಣ ಹೆಚ್ಚಳದಿಂದ ಸಮುದಾಯದ ಮತಗಳು ಬಿಜೆಪಿಯತ್ತ ಧೃವೀಕರಣವಾಗಿದೆ. ಕಾಂಗ್ರೆಸ್ ಗೆ ಸುದೀಪ್ ಆಗಮಿಸಿದರೆ ವಾಲ್ಮೀಕಿ ಮತಗಳನ್ನು ತನ್ನತ್ತ ಸೆಳೆಯಲು ಸಹಕಾರವಾಗುತ್ತದೆ ಎಂಬ ಲೆಕ್ಕಚಾರದಲ್ಲಿ ಸುದೀಪ್ ಅವರನ್ನು ಕಾಂಗ್ರೆಸ್ ಗೆ ಆಹ್ವಾನಿಸಲಾಗಿದೆ ಎನ್ನಲಾಗಿತ್ತು. ಈ ವಿಚಾರಕ್ಕೆ ಇದೀಗ ನಟ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.