ರಣಜಿ ಟ್ರೋಫಿ: ಗೌತಮ್ ಗೆ 5 ವಿಕೆಟ್, ಜಾರ್ಖಂಡ್ ವಿರುದ್ಧ ಕರ್ನಾಟಕಕ್ಕೆ 9 ವಿಕೆಟ್ ಜಯ

ರಣಜಿ ಟ್ರೋಫಿ: ಗೌತಮ್ ಗೆ 5 ವಿಕೆಟ್, ಜಾರ್ಖಂಡ್ ವಿರುದ್ಧ ಕರ್ನಾಟಕಕ್ಕೆ 9 ವಿಕೆಟ್ ಜಯ

ಸ್ಪಿನ್ನರ್ ಕೆ.ಗೌತಮ್ ಮಾರಕ ದಾಳಿ ನೆರವಿನಿಂದ ಕರ್ನಾಟಕ (karnataka) ತಂಡ ರಣಜಿ ಟ್ರೋಫಿ (ranaji trophy) ಪಂದ್ಯದಲ್ಲಿ ಜಾರ್ಖಂಡ್ ತಂಡವನ್ನು 9 ವಿಕೆಟ್ ಗಳ ಭಾರೀ ಅಂತರದಿಂದ ಮಣಿಸಿದೆ.

ಜೆಮ್ಶೆಡ್ ಪುರದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಜಾರ್ಖಂಡ್ ತಂಡ ಎರಡನೇ ಇನಿಂಗ್ಸ್ ನಲ್ಲಿ 201 ರನ್ ಗೆ ಆಲೌಟ್ ಆಯಿತು.

ಮೊದಲ ಇನಿಂಗ್ಸ್ ನಲ್ಲಿ 136 ರನ್ ಮುನ್ನಡೆ ಪಡೆದಿದ್ದ ಕರ್ನಾಟಕ ತಂಡ ಗೆಲ್ಲಲು 66 ರನ್ ಗುರಿಯನ್ನು 1 ವಿಕೆಟ್ ಕಳೆದುಕೊಂಡು ತಲುಪಿತು.

ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ದೇವದತ್ ಪಡಿಕಲ್ ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿದರು. ಆದರೆ ಆರ್.ಸಮರ್ಥ್ (ಅಜೇಯ 24) ಮತ್ತು ನಿಕಿನ್ ಜೋಶ್ (ಅಜೇಯ 42) ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದ ಗೌತಮ್ ಎರಡನೇ ಇನಿಂಗ್ಸ್ ನಲ್ಲಿ 5 ವಿಕೆಟ್ ಪಡೆದು ಜಾರ್ಖಂಡ್ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವಾಸುಕಿ ಕೌಶಿಕ್ 3 ಮತ್ತು ಶ್ರೇಯಸ್ ಗೋಪಾಲ್ 2 ವಿಕೆಟ್ ಗಳಿಸಿದರು.

ಜಾರ್ಖಂಡ್ ಪರ ಕೆಳ ಕ್ರಮಾಂಕದಲ್ಲಿ ಸುಪ್ರಿಯೊ ಚಕ್ರವರ್ತಿ (48), ಅಂಕುಲ್ ರಾಯ್ (36), ಕುಮಾರ್ ಕುಶಾಗ್ರ (36) ಮತ್ತು ಕುಮಾರ್ ಸೂರಜ್ (34) ತಕ್ಕಮಟ್ಟಿಗೆ ಹೋರಾಟ ನಡೆಸಿ ತಂಡವನ್ನು ಇನಿಂಗ್ಸ್ ಸೋಲಿನಿಂದ ಪಾರು ಮಾಡಿದರು.