ಯಾವುದೇ ಕ್ಷಣದಲ್ಲಿ ವರಿಷ್ಠರನ್ನು ಭೇಟಿಯಾಗಲಿದ್ದಾರೆ ಶೆಟ್ಟರ್..?

ಯಾವುದೇ ಕ್ಷಣದಲ್ಲಿ ವರಿಷ್ಠರನ್ನು ಭೇಟಿಯಾಗಲಿದ್ದಾರೆ ಶೆಟ್ಟರ್..?

ನವದೆಹಲಿ,ನ.13- ರಾಜಕೀಯದಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿರುವ ಬಿಟ್ ಕಾಯಿನ್ ಪ್ರಕರಣದ ಕೂಗೂ ಜೋರಿರುವಾಗಲೇ ನವದೆಹಲಿಗೆ ತೆರಳಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಯಾವುದೇ ಕ್ಷಣದಲ್ಲೂ ವರಿಷ್ಠರನ್ನು ಭೇಟಿಯಾಗುವ ಸಂಭವವಿದೆ.

ಮುಂಬೈ ಪ್ರವಾಸದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ವಾರಣಾಸಿಗೆ ತೆರಳಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ದೆಹಲಿಗೆ ಹಿಂತಿರುಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್ ಕೂಡ ದೆಹಲಿಯಲ್ಲೇ ಇರುವುದರಿಂದ ಯಾವುದೇ ವೇಳೆ ಶೆಟ್ಟರ್ ವರಿಷ್ಠರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಯಾವಾಗ ಪಕ್ಷದ ನಾಯಕರನ್ನು ಭೇಟಿಯಾಗಲಿದ್ದಾರೆ ಎಂಬುದು ಈವರೆಗೂ ದೃಢಪಟ್ಟಿಲ್ಲವಾದರೂ ಅಕೃತ ಮೂಲಗಳ ಪ್ರಕಾರ ಸಂಜೆ ಅಥವಾ ನಾಳೆಯೊಳಗೆ ಶೆಟ್ಟರ್ ಮತ್ತು ವರಿಷ್ಠರ ನಡುವೆ ಮಾತುಕತೆಗೆ ವೇದಿಕೆ ಸಿದ್ದವಾಗಿದೆ ಎನ್ನಲಾಗುತ್ತಿದೆ.

ವರಿಷ್ಠರ ಸೂಚನೆಯಂತೆ ದೆಹಲಿಗೆ ತೆರಳಿರುವ ಶೆಟ್ಟರ್ ಈವರೆಗೂ ತಮ್ಮ ಪ್ರವಾಸದ ಬಗ್ಗೆ ಯಾರ ಬಳಿಯೂ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಕೇವಲ ಅಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವುದಾಗಿ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡುತ್ತಿದ್ದಾರೆ.

ಆದರೆ ಅವರ ಆಪ್ತ ವಲಯಗಳು ಹೇಳುವ ಪ್ರಕಾರ ವರಿಷ್ಠರ ನಿರ್ದೇಶನದಂತೆಯೇ ಶೆಟ್ಟರ್ ದೆಹಲಿಗೆ ತೆರಳಿರುವುದಾಗಿ ತಿಳಿದುಬಂದಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆ. ಯಾವುದೇ ರಾಜಕೀಯ ನಾಯಕರನ್ನು ಈ ವೇಳೆ ಭೇಟಿಯಾಗುವುದಿಲ್ಲ. ಎಲ್ಲೂ ರಾಜಕೀಯದ ಬಗ್ಗೆ ಚರ್ಚೆ ನಡೆಸುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬಿಟ್ ಕಾಯಿನ್ ಹಗರಣ ಸದ್ದು ಮಾಡುತ್ತಿರುವ ಮಧ್ಯೆಯೇ ನಾಯಕತ್ವ ಬದಲಾವಣೆ ಬಗ್ಗೆಯೂ ವದಂತಿ ಹಬ್ಬಿತ್ತು. ಈಗಾಗಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ದೆಹಲಿಗೆ ತೆರಳಿ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ವಿವರಣೆ ನೀಡಿದ್ದಾರೆ.

ಮೂಲಗಳ ಪ್ರಕಾರ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ನಂತರ ಅಭ್ಯರ್ಥಿಗಳ ಪರ ಬ್ಯಾಟಿಂಗ್‍ಗಾಗಿ ಜಗದೀಶ್ ಶೆಟ್ಟರ್ ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ತಮ್ಮ ಸಹೋದರ ಪ್ರದೀಪ್ ಶೆಟ್ಟರ್ ಅವರಿಗೆ ಟಿಕೆಟ್ ಪಡೆಯಲು ದೆಹಲಿಗೆ ತೆರಳಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.