ಮೇಕೆದಾಟು ಪಾದಯಾತ್ರೆ ಹೊರಟ 'ಕೈ'ನಾಯಕರ ಮೇಲೆ ಬಿತ್ತು 3ನೇ ಕೇಸು: ಡಿ ಕೆ ಶಿವಕುಮಾರ್ ಸೇರಿ 64 ಮಂದಿ ವಿರುದ್ಧ ಎಫ್‌ಐಆರ್ ದಾಖಲು

ಮೇಕೆದಾಟು ಪಾದಯಾತ್ರೆ ಹೊರಟ 'ಕೈ'ನಾಯಕರ ಮೇಲೆ ಬಿತ್ತು 3ನೇ ಕೇಸು: ಡಿ ಕೆ ಶಿವಕುಮಾರ್ ಸೇರಿ 64 ಮಂದಿ ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಕೊರೋನಾ ರೂಪಾಂತರಿ ಪ್ರಕರಣ ಸೇರಿದಂತೆ ಕೋವಿಡ್-19 ಕೇಸುಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕೊರೋನಾ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ 3ನೇ ಕೇಸು ದಾಖಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಇತರ 63 ಮಂದಿ ಕಾಂಗ್ರೆಸ್ ನಾಯಕರು, ಪಾದಯಾತ್ರೆಯಲ್ಲಿ ಭಾಗವಹಿಸಿದವರ ವಿರುದ್ಧ ರಾಮನಗರದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕನಕಪುರ ಠಾಣೆಯಲ್ಲಿ ಮೂರನೇ ಎಫ್‌ಐಆರ್ ದಾಖಲಾಗಿದೆ.

ಇಂದು ಮಧ್ಯಾಹ್ನ ಹೈಕೋರ್ಟ್ ತುರ್ತು ವಿಚಾರಣೆ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೇ ಅಲೆ ನಿಯಂತ್ರಿಸಲು ಕರ್ನಾಟಕ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ಆದರೆ ಕಾಂಗ್ರೆಸ್ ನಾಯಕರು ಕೊರೊನಾ ನಿಮಯಗಳನ್ನ ಗಾಳಿಗೆ ತೂರಿ ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ತುರ್ತು ವಿಚಾರಣೆಗೆ ವಕೀಲ ಶ್ರೀಧರ್ ಪ್ರಭು ಮನವಿ ಮಾಡಿದ್ದಾರೆ.

ಕೆಪಿಸಿಸಿ ಪಾದಯಾತ್ರೆಯಿಂದ ಕೊರೊನಾ ಸೋಂಕು ಹಬ್ಬುತ್ತದೆ. ಸರ್ಕಾರ ಪಾದಯಾತ್ರೆ ತಡೆಗೆ ಕ್ರಮ ಕೈಗೊಂಡಿಲ್ಲ. ಮಾಸ್ಕ್ ಇಲ್ಲದೇ ನಾಯಕರು ಮಕ್ಕಳನ್ನ ಭೇಟಿ ಮಾಡಿದ್ದಾರೆ. ಪಾದಯಾತ್ರೆ ಸೂಪರ್ ಸ್ಪ್ರೆಡರ್ ಆಗುವ ಸಾಧ್ಯತೆ ಇದೆ. ಹೀಗಾಗಿ ಪಿಐಎಲ್ ತುರ್ತು ವಿಚಾರಣೆಗೆ ವಕೀಲ ಶ್ರೀಧರ್ ಪ್ರಭು ಮನವಿ ಮಾಡಿದ್ದಾರೆ. ಇಂದು ಮಧ್ಯಾಹ್ನ ಪಿಐಎಲ್ ವಿಚಾರಣೆಗೆ ಹೈಕೋರ್ಟ್ ಸಮ್ಮತಿ ನೀಡಲಿದೆ.

ಹೈಕೋರ್ಟ್ ಇಂದು ಮಧ್ಯಾಹ್ನ ತುರ್ತು ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ನಾವು ಡೋಂಟ್ ಕ್ಯಾರ್: ನಾನು ಸೇರಿದಂತೆ ಪಕ್ಷದ 30 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇಂತಹ ಕೇಸ್‌ಗಳಿಗೆಲ್ಲ ನಾವು ಹೆದರುವುದಿಲ್ಲ. ಕೊರೊನ ನಿಯಮ ಉಲ್ಲಂಘಿಸಿದ ಮುಖ್ಯಮಂತ್ರಿಗಳು ಸೇರಿ ಬಿಜೆಪಿಯವರ ಮೇಲೂ ಏಕೆ ಪ್ರಕರಣ ದಾಖಲಿಸಿಲ್ಲ? ಇದರಿಂದ ಸರ್ಕಾರದ ದುರುದ್ದೇಶ ಸ್ಪಷ್ಟವಾಗುತ್ತದೆ. ಅದರೆ ನಮ್ಮ ಪಾದಯಾತ್ರೆ ತಡೆಯಲು ಅವರಿಂದ ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.