ಮೆಟ್ರೋದಲ್ಲಿ ಮಂಗ! ಸಭ್ಯವಾಗಿ ಸೀಟಲ್ಲಿ ಕೂತು ಪ್ರಯಾಣ!
ನವದೆಹಲಿ : ದೆಹಲಿ ಮೆಟ್ರೋ ಟ್ರೈನಿನಲ್ಲಿ ಮಂಗವೊಂದು ಪ್ರಯಾಣ ಮಾಡುತ್ತಿರುವ ಕುತೂಹಲಕಾರಿ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲು ಕೋಚ್ನ ಎಲ್ಲೆಡೆ ಪರದಾಡುವ ಕೋತಿ ಕೊನೆಗೆ ಸೀಟೊಂದರಲ್ಲಿ ಪ್ರಯಾಣಿಕರ ಪಕ್ಕ ಹೋಗಿ ಕುಳಿತುಕೊಂಡು ಸಭ್ಯವಾಗಿ ನಡೆದುಕೊಳ್ಳುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋವನ್ನು ಅಜಯ್ ತೋಮರ್ ಎಂಬುವರು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. 'ದೆಹಲಿ ಮೆಟ್ರೋದಲ್ಲಿ ಆನಂದ್ ವಿಹಾರ್ನಿಂದ ದ್ವಾರಕಾವಾಲಿ ಟ್ರೈನ್ನಲ್ಲಿ ಕೋತಿಯೊಂದು ನುಗ್ಗಿಬಂದಿತು. ಕೋತಿಯ ಪ್ರಯಾಣದ ನೋಟ ನೋಡಿ' ಎಂದು ಟಿಪ್ಪಣಿ ಬರೆದಿದ್ದಾರೆ. ಶನಿವಾರದಿಂದ ಹರಿದಾಡುತ್ತಿರುವ ಈ ತುಣುಕಲ್ಲಿ ವ್ಯಕ್ತಿಯೊಬ್ಬರು ಹಿಂದಿಯಲ್ಲಿ 'ಮಂಗಕ್ಕೂ ಮಾಸ್ಕ್ ಹಾಕಿಬಿಡಿ' ಎನ್ನುವುದೂ ಕೇಳುತ್ತದೆ.
ವಿಡಿಯೋ ನಡುವೆ ಒಬ್ಬರು ಯಮುನಾ ಬ್ಯಾಂಕ್ ಸ್ಟೇಷನ್ ಅಂತ ಹೇಳುವುದು ಕೇಳಿಸುತ್ತದೆ. ಸದರಿ ಸ್ಟೇಷನ್ ದೆಹಲಿ ಮೆಟ್ರೋನ ಬ್ಲೂ ಲೈನ್ನಲ್ಲಿ ಬರುವುದರಿಂದ ಇದರ ಬಗ್ಗೆ ನೆಟ್ಟಿಗರು ನಗರದ ಮೆಟ್ರೋ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಇದಕ್ಕೆ ಮೆಟ್ರೊ ಅಧಿಕಾರಿಗಳು 'ಕೋಚ್ ನಂಬರ್ ಮತ್ತು ಹಾಲಿ ಸ್ಟೇಷನ್ ಮಾಹಿತಿ ನೀಡಿ' ಎಂದು ಪ್ರತಿಕ್ರಿಯಿಸಿದ್ದಾರೆ.