ಮುಂದಿನ ಚುನಾವಣೆಗೆ ಸ್ಪರ್ಧೆ: ಮಾಜಿ ಸಂಸದ, ನಟ ಶಶಿಕುಮಾರ್
ಮೊಳಕಾಲ್ಮುರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಸ್.ಟಿ. ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ. ಚಳ್ಳಕೆರೆ, ಮೊಳಕಾಲ್ಮುರುಕ್ಷೇತ್ರಗಳು ಮೀಸಲು ಕ್ಷೇತ್ರವಾಗಿವೆ. ಯಾವ ಕ್ಷೇತ್ರ ಹಾಗೂ ಪಕ್ಷದ ಆಯ್ಕೆ ಮಾಡಲಾಗುತ್ತಿದೆ ಎಂದು ಮಾಜಿ ಸಂಸದ, ನಟ ಶಶಿಕುಮಾರ್ ಹೇಳಿದರು.
ತಾಲ್ಲೂಕಿನ ಹಾನಗಲ್ನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 'ವಿಧಾನಪರಿಷತ್ ಚುನಾವಣೆ ನಂತರ ಮೊಳಕಾಲ್ಮುರಿಗೆ ಭೇಟಿ ನೀಡುತ್ತೇನೆ. ಕೆಲ ದಿನಗಳಿಂದ ಎರಡೂ ಕ್ಷೇತ್ರಗಳ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ. ಹೋದ ಕಡೆ ಉತ್ತಮ ವಾತಾವರಣ ಕಂಡುಬರುತ್ತಿದೆ. ಸ್ಪರ್ಧೆ ಮಾಡಿದಲ್ಲಿ ಜನರು ಕೈಹಿಡಿಯುವ ವಿಶ್ವಾಸವಿದೆ. ಸ್ಪರ್ಧೆ ಇಂಗಿತ ಬಗ್ಗೆ ರಾಜ್ಯ ನಾಯಕರನ್ನು ಭೇಟಿಯಾಗಿ ಮಾತನಾಡಿದ್ದು, ಅವರು ಸ್ಪಂದಿಸಿದ್ದಾರೆ. ಶೀಘ್ರ ನಿರ್ಧಾರ ಪ್ರಕಟಿಸುತ್ತೇನೆ' ಎಂದು ಹೇಳಿದರು.
'ಸಂಸದನಾಗಿದ್ದಾಗ ಬರುತ್ತಿದ್ದ ಅಲ್ಪ ಅನುದಾನದಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಜನರು ಈಗಲೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಇದು ಸಂತಸ ತಂದಿದೆ' ಎಂದು ಹೇಳಿದರು.