ಮಂಗಳೂರು ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆ
ಮಂಗಳೂರು: ಕೋವಿಡ್ ವರ್ಷ ಹಾಗೂ ಆ ಬಳಿಕದ ವರ್ಷಗಳಲ್ಲಿ ಪ್ರಯಾಣಿಕರ ಕೊರತೆಯಿಂದ ಕಂಗೆಟ್ಟಿದ್ದ ಮಂಗಳೂರು ವಿಮಾನ ನಿಲ್ದಾಣವೀಗ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ.
2019ರ ಎಪ್ರಿಲ್ 1ರಿಂದ ಅ. 31ರ ಅವಧಿಯಲ್ಲಿ ವಿಮಾನ ನಿಲ್ದಾಣವು 11,04,585 ಪ್ರಯಾಣಿಕರನ್ನು ನಿರ್ವಹಿಸಿದೆ.
2022-23ರ ಆರ್ಥಿಕ ವರ್ಷದಲ್ಲಿ 10,51,299 ಪ್ರಯಾಣಿಕರನ್ನು (ಎಪ್ರಿಲ.-ಅಕ್ಟೋಬರ್) ನಿರ್ವ ಹಿಸಿದ್ದು, 2021-22ರಲ್ಲಿ ಇದೇ ಅವಧಿ ಯಲ್ಲಿ 4,29,929 ಪ್ರಯಾಣಿಕರನ್ನು ನಿರ್ವಹಿಸಿತ್ತು, ಈ ಮೂಲಕ ಶೇ. 144.51 ಬೆಳವಣಿಗೆ ಸಾಧಿಸಿದೆ.
ಪ್ರಸ್ತುತ ಮಂಗಳೂರು ವಿಮಾನ ನಿಲ್ದಾಣ ಎಪ್ರಿಲ್‌ನಿಂದ ಅಕ್ಟೋಬರ್ ವರೆಗೆ 8,561 ಪ್ರಯಾಣಿಕರನ್ನು ನಿರ್ವಹಿಸಿದ್ದು, 2021-22ರ ಅವಧಿಯಲ್ಲಿ 4,814 ಪ್ರಯಾಣಿಕರನ್ನು ನಿರ್ವಹಿಸಿ ಶೇ.77.83 ಬೆಳವಣಿಗೆ ದಾಖಲಿಸಿದೆ.
ಈ ವಿಮಾನ ನಿಲ್ದಾಣ ದೇಶೀಯ ವಾಗಿ ಹೊಸದಿಲ್ಲಿ, ಮುಂಬಯಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಪುಣೆ ಮತ್ತು ಹುಬ್ಬಳ್ಳಿಗೆ ನೇರ ವಿಮಾನ ಸಂಪರ್ಕವನ್ನು ಒದಗಿಸುತ್ತಿದೆ. ಮಾತ್ರವಲ್ಲದೇ ದುಬಾೖ, ದಮ್ಮಾಮ್, ಮಸ್ಕತ್, ಕುವೈಟ್, ದೋಹಾ, ಬಹ್ರೈನ್ ಮತ್ತು ಅಬುಧಾಬಿಗೆ ವಿಮಾನಗಳನ್ನು ಕಾರ್ಯನಿರ್ವಹಿಸುತ್ತಿವೆ.
ರೇಟಿಂಗ್ ಏಜೆನ್ಸಿ ಇನ್ವೆಸ್ಟ್‌ಮೆಂಟ್ ಇನ್‌ಫಾರ್ಮೇಶನ್ ಮತ್ತು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಆಫ್ ಇಂಡಿಯಾ ಲಿಮಿಟೆಡ್ (ಐಸಿಆರ್‌ಎ) ತನ್ನ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ನೀಡಿದೆ ಎಂದು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.