ಭಾರತದಿಂದ ಪಾಕ್‌ ಮಾರ್ಗವಾಗಿ ಅಫ್ಗನ್‌ಗೆ ಗೋಧಿ: ಮನವಿ ಪರಿಗಣಿಸಲು ಒಪ್ಪಿದ ಇಮ್ರಾನ್

ಭಾರತದಿಂದ ಪಾಕ್‌ ಮಾರ್ಗವಾಗಿ ಅಫ್ಗನ್‌ಗೆ ಗೋಧಿ: ಮನವಿ ಪರಿಗಣಿಸಲು ಒಪ್ಪಿದ ಇಮ್ರಾನ್

ಇಸ್ಲಾಮಾಬಾದ್: ಪಾಕಿಸ್ತಾನದ ಮೂಲಕ ಭಾರತದ ಗೋಧಿ ಸಾಗಣೆಗೆ ಅನುಮತಿ ನೀಡುವಂತೆ ಅಫ್ಗಾನಿಸ್ತಾನದ ಮನವಿಯನ್ನು ಪರಿಗಣಿಸುವುದಾಗಿ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಹೇಳಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಅವರು, 'ಸಂಕಷ್ಟದಲ್ಲಿರುವ ದೇಶವೊಂದರ ಗಂಭೀರ ಬಿಕ್ಕಟ್ಟನ್ನು ಪರಿಹರಿಸಲು ಅಂತರರಾಷ್ಟ್ರೀಯ ಸಮುದಾಯವು ಸಾಮೂಹಿಕ ಜವಾಬ್ದಾರಿಯನ್ನು ಹೊಂದಬೇಕು' ಎಂದು ಪ್ರತಿಪಾದಿಸಿದ್ದಾರೆ.

'ಪಾಕಿಸ್ತಾನದ ಮೂಲಕ ಭಾರತದ ಗೋಧಿ ಸಾಗಣೆಗೆ ಅವಕಾಶ ಮಾಡಿಕೊಡುವಂತೆ ಅಫ್ಗನ್‌ ಸಹೋದರರು ಮನವಿ ಮಾಡಿದ್ದಾರೆ. ಅದನ್ನು ನಾವು ಪರಿಗಣಿಸುತ್ತೇವೆ' ಎಂದು ಖಾನ್ ಹೇಳಿದ್ದಾರೆ.

ಅಪ್ಗಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಅವರನ್ನು ಒಳಗೊಂಡ ನಿಯೋಗವು ಇಮ್ರಾನ್‌ ಖಾನ್‌ ಅವರಿಗೆ ಈ ಮನವಿಯನ್ನು ಸಲ್ಲಿಸಿದೆ.

ಅಫ್ಗನ್ ಜನರ ಮೂಲಭೂತ ಅಗತ್ಯಗಳಿಗೆ ಭಾರತವು ಕೊಡುಗೆ ನೀಡುತ್ತಲೇ ಬಂದಿದೆ. ಕಳೆದ ದಶಕದಲ್ಲಿ ಅಫ್ಗಾನಿಸ್ತಾನಕ್ಕೆ 1 ಮಿಲಿಯನ್ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಗೋಧಿಯನ್ನು ಒದಗಿಸಿದೆ.

ಕಳೆದ ವರ್ಷ ಭಾರತವು 75,000 ಮೆಟ್ರಿಕ್ ಟನ್ ಗೋಧಿಯನ್ನು ಅಫ್ಗಾನಿಸ್ತಾನಕ್ಕೆ ರವಾನಿಸಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೆಪ್ಟೆಂಬರ್‌ನಲ್ಲಿ ತಿಳಿಸಿದ್ದರು.

ಆಗಸ್ಟ್‌ 15ರಂದು ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಪಾಕಿಸ್ತಾನವು, ಜಗತ್ತಿನ ಇತರೆ ದೇಶಗಳಿಗೆ ತಾಲಿಬಾನ್ ಜೊತೆಗೆ ರಾಜತಾಂತ್ರಿಕವಾಗಿ ವ್ಯವಹರಿಸಬೇಕು ಎಂದು ಮನವೊಲಿಸಲು ಯತ್ನಿಸುತ್ತಿದೆ. ಆದರೆ, ಅಂತರರಾಷ್ಟ್ರೀಯ ಸಮುದಾಯ ಇಂದಿಗೂ ತಾಲಿಬಾನ್‌ ಕುರಿತಂತೆ ಸಂಶಯಾಸ್ಪದ ಭಾವನೆಯನ್ನೇ ಹೊಂದಿದೆ.