ಭಾರತ ಉಸಿರುಗಟ್ಟಿಸುವಂತಿದ್ದರೆ, ಬಿಟ್ಟು ತೊಲಗಿ ಎಂದ ಆರ್‌ಎಸ್‌ಎಸ್

ನವದೆಹಲಿ, ಡಿಸೆಂಬರ್ 07: ''ಭಾರತ ಉಸಿರುಗಟ್ಟಿಸುವಂತಿದ್ದರೆ ದೇಶ ಬಿಟ್ಟು ತೊಲಗಿ'' ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾಗೆ ಆರ್‌ಎಸ್‌ಎಸ್ ಹೇಳಿದೆ.
ಈ ಹಿಂದೆ, ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಹಕ್ಕುಗಳನ್ನು ಮರಳಿ ಪಡೆಯಲು ರೈತರಂತೆ ಪ್ರತಿಭಟನೆ ನಡೆಸಬೇಕು, ತ್ಯಾಗ ಮಾಡಬೇಕು ಎಂಬ ಫಾರೂಖ್ ಹೇಳಿಕೆಗೆ ಆರ್‌ಎಸ್‌ಎಸ್ ಅಸಮಾಧಾನ ವ್ಯಕ್ತಪಡಿಸಿದೆ.
ಅಬ್ದುಲ್ಲಾ ಅವರು ''ಭಾರತದಲ್ಲಿ ಉಸಿರುಗಟ್ಟಿಸುವಂತಹ ವಾತಾವರಣ ಇದೆ ಎಂದು ಭಾವಿಸಿದರೆ ಪ್ರಪಂಚದ ಯಾವುದೇ ಭಾಗದಲ್ಲಿ ಅವರು ವಾಸಿಸಬಹುದು. ದೇಶ ತೊರೆದು ಬೇರೆ ದೇಶದಲ್ಲಿ ವಾಸ ಮಾಡಬಹುದು'' ಎಂದು ವ್ಯಂಗ್ಯಮಿಶ್ರಿತ ಸಲಹೆಯನ್ನು ಇಂದ್ರೇಶ್ ಕುಮಾರ್ ನೀಡಿದ್ದಾರೆ.
ಜಮ್ಮುವಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್‌ಎಸ್‌ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್, ಫಾರೂಖ್ ಅಬ್ದುಲ್ಲಾ ಹಿಂಸೆಯನ್ನು ಪ್ರೀತಿಸುತ್ತಾರೆ, ಶಾಂತಿಯನ್ನಲ್ಲ ಎಂಬುದು ಅವರ ಹೇಳಿಕೆಯಿಂದ ಗೊತ್ತಾಗುತ್ತದೆ.
ಜಮ್ಮು ಮತ್ತು ಕಾಶ್ಮೀರದ ಇಬ್ಬರೂ ನಾಯಕರು ಪ್ರಚೋದನಾತ್ಮಕ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಅವರ ಪ್ರಚೋದನಕಾರಿ ಹೇಳಿಕೆಗಳು ಅಡ್ಡಿಯಾಗುತ್ತವೆ ಎಂದು ಇಂದ್ರೇಶ್ ಕುಮಾರ್ ಮೆಹಬೂಬಾ ಮುಫ್ತಿ ವಿರುದ್ಧವೂ ಕಿಡಿಕಾರಿದರು.
ಭಾನುವಾರ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರ 116ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶ್ರೀನಗರದ ನಸೀಂಬಾಗ್‌ನಲ್ಲಿರುವ ಸಮಾಧಿಯ ಬಳಿ ನ್ಯಾಷನಲ್ ಕಾನ್ಫರೆನ್ಸ್ ಯುವ ವಿಭಾಗದ ಸಮಾವೇಶ ಉದ್ದೇಶಿಸಿ ಮಾತನಾಡಿದ ಫಾರೂಖ್ ಅಬ್ದುಲ್ಲಾ ಈ ರೀತಿಯ ಹೇಳಿಕೆ ನೀಡಿದ್ದರು.
ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಮರು ಪಡೆಯಲು ಚೀನಾದ ನೆರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಫಾರೂಕ್ ಅಬ್ದುಲ್ಲಾ ಈ ಹಿಂದೆ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಇಂದ್ರೇಶ್ ಕುಮಾರ್, ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
ಅವರು ಭಾರತದಲ್ಲಿರಲು ಇಷ್ಟ ಪಡದಿದ್ದರೆ, ಬೇರೆ ಎಲ್ಲಿ ಬೇಕಾದರೂ ವಾಸ ಮಾಡಬಹುದು. ಅರಬ್ ಅಥವಾ ಅಮೆರಿಕ ಅಥವಾ ಅವರ ಪತ್ನಿ ವಾಸ ಮಾಡುತ್ತಿರುವ ಇಂಗ್ಲೆಂಡ್ಗೆ ತೆರಳಿಯೂ ವಾಸ ಮಾಡಲು ಯೋಚನೆ ಮಾಡಬಹುದು ಎಂದರು.
ಸ್ವಲ್ಪ ದಿನಗಳ ಹಿಂದಷ್ಟೇ ನನ್ನನ್ನು ಹತ್ಯೆ ಮಾಡಿದರೂ ಕಾಶ್ಮೀರವು ಪಾಕಿಸ್ತಾನದ ಭಾಗವಾಗಿರುವುದಿಲ್ಲ ಎಂದು ಫಾರೂಖ್ ಅಬ್ದುಲ್ಲಾ ಹೇಳಿದ್ದರು.
ಅಕ್ಟೋಬರ್ 7 ರಂದು ಗುರುದ್ವಾರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಈದ್ಗಾದಲ್ಲಿರುವ ಸರ್ಕಾರಿ ಶಾಲೆಯ ಪ್ರಾಂಶುಪಾಲ ಸುಪಿಂದರ್ ಕೌರ್ ಅವರ ಸಂತಾಪ ಸಭೆಯಲ್ಲಿ ಮಾತನಾಡಿದ ಅಬ್ದುಲ್ಲಾ, ಕಾಶ್ಮೀರದ ಜನರು ಧೈರ್ಯದಿಂದ ಇರಬೇಕು ಮತ್ತು ಒಗ್ಗಟ್ಟಾಗಿ ಕೊಲೆಗಾರರ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ನಾವು ಈ ಮೃಗಗಳ ವಿರುದ್ಧ ಹೋರಾಡಬೇಕು, ಏನೇ ಬಂದರೂ ನಾವು ಭಾರತದ ಭಾಗವಾಗಿರಬೇಕು, ಅವರು ನನ್ನನ್ನು ಶೂಟ್ ಮಾಡಿ ಕೊಂದರೂ ಈ ನಿರ್ಧಾರ ಬದಲಾಗಬಾರದು ಎಂದು ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.
ಕೌರ್ ಹತ್ಯೆಗೆ ದುಃಖ ವ್ಯಕ್ತಪಡಿಸಿದ ಅವರು 1990ರಲ್ಲಿ ಭಯದಿಂದ ಎಲ್ಲರಬ ಕಣಿವೆ ರಾಜ್ಯವನ್ನು ತೊರೆದರು ಆದರೆ ಸಿಖ್ ಸಮುದಾಯ ಮಾತ್ರ ಕಾಶ್ಮೀರ ತೊರೆಯಲಿಲ್ಲ, ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ, ಏನೇ ಬಂದರು ನಾವು ನಿಮ್ಮ ಜೊತೆಗಿರುತ್ತೇವೆ ಎಂದು ವಿಶ್ವಾಸ ಮಾತುಗಳನ್ನಾಡಿದ್ದಾರೆ.
ಇದಾದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಉಸಿರುಗಟ್ಟಿಸುವಂತಹ ವಾತಾವರವಿದೆ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆ ಕುರಿತು ಆರ್‌ಎಸ್‌ಎಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.