ಫೆ. 11 ರಂದು ರಾಜ್ಯಕ್ಕೆ ಮತ್ತೆ ಅಮಿತ್ ಶಾ ಆಗಮನ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಪುತ್ತೂರು : ಬಿಜೆಪಿ ಚಾಣಕ್ಯ , ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.11 ರಂದು ಪುತ್ತೂರಿಗೆ ಆಗಮಿಸಲಿದ್ದಾರೆ. ಪುತ್ತೂರಿಗೆ ಆಗಮಿಸು ಅಮಿತ್ ಶಾ ವಿವೇಕಾನಂದ ವಿದ್ಯಾಸಂಸ್ಥೆಯ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಫೆ.10 ರಿಂದ 12 ರವರೆಗೆ ನೆಹರೂ ನಗರದಲ್ಲಿರುವ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕ್ಯಾಂಪ್ಕೋ ಆಶ್ರಯದಲ್ಲಿ ಬೃಹತ್ ಕೃಷಿ ಯಂತ್ರ ಮೇಳವೂ ನಡೆಯಲಿದೆ. ವಿಧಾನಸಭೆ ಚುನಾವಣೆ ಸಮೀಪದ ಬೆನ್ನಲ್ಲೇ ಕೇಂದ್ರದ ನಾಯಕರು ರಾಜ್ಯ ಭೇಟಿಗೆ ಆಗಮಿಸುತ್ತಿದ್ದಾರೆ. ಈ ತಿಂಗಳಿನಲ್ಲಿ ಮತ್ತೆ ಪ್ರಧಾನಿ ಮೋದಿ ಕೂಡ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.ಅಮಿತ್ ಶಾ ಭೇಟಿ ಹಿನ್ನೆಲೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಚಿವ ಅಂಗಾರ, ನಳೀನ್ ಕುಮಾರ್ ಕಟೀಲ್ ಮತ್ತಿತರರು ಇರಲಿದ್ದಾರೆ.
ಇನ್ನೂ, ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 6 ರಂದು ಬೆಂಗಳೂರು ಮತ್ತು ತುಮಕೂರಿಗೆ ಭೇಟಿ ನೀಡಲಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಚುನಾವಣೆ ನಡೆಯಲಿರುವ ಕರ್ನಾಟಕಕ್ಕೆ ಇದು ಅವರ ಮೂರನೇ ಭೇಟಿಯಾಗಿದೆ. ಫೆಬ್ರವರಿ 6 ರಂದು ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಮೋದಿ ಅವರು ಇಂಡಿಯಾ ಎನರ್ಜಿ ವೀಕ್ ಅನ್ನು ಉದ್ಘಾಟಿಸಲಿದ್ದಾರೆ. ನಂತರ ತುಮಕೂರಿನ ಗುಬ್ಬಿ ತಾಲ್ಲೂಕಿನ ಬಿದರಹಳ್ಳಿ ಕಾವಲ್ ಗೆ ತೆರಳಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಹೆಲಿಕಾಪ್ಟರ್ ಫ್ಯಾಕ್ಟರಿಯನ್ನು ಉದ್ಘಾಟಿಸಲಿದ್ದು, ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರಿನಲ್ಲಿ ಜಲ ಜೀವನ್ ಮಿಷನ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.